ಸೋಮವಾರ, ನವೆಂಬರ್ 16, 2009

ದೀಪವಿರದ ದಾರಿಯಲ್ಲಿ...

                                         (ಭಾಗ-1)        

                 ಕಂಪ್ಯೂಟರ್ ಪರದೆಯನ್ನೇ ದಿಟ್ಟಿಸುತ್ತಿದ್ದೇನೆ. ಕೆಲವು ಗಂಟೆಗಳೇ ಕಳೆದು ಹೋಗಿವೆ. ಹೀಗೆ ಇನ್ನೆಷ್ಟು ಹೊತ್ತು ಕುಳಿತಿರುತ್ತೇನೋ ಗೊತ್ತಿಲ್ಲ. ನನ್ನ ಬೆರಳುಗಳು ಕೀಲಿಮಣೆಯ ಮೇಲೆ ಸುಮ್ಮನೆ ಹರಿದಾಡುತ್ತಿವೆ. ಆದರೆ ಪರದೆಯ ಮೇಲೆ ಮಾತ್ರ ಅಕ್ಷರಗಳು ಮೂಡಲು ಹಿಂದೇಟು ಹಾಕುತ್ತಿವೆ. ನನ್ನ ಬೆರಳುಗಳು ಹಾಕುತ್ತಿರುವ ಒತ್ತಡಕ್ಕೆ ಕೀಲಿಮಣೆ ಸ್ಪಂದಿಸುತ್ತಿಲ್ಲ. ನನ್ನಲ್ಲಿ ಉಳಿದಿದ್ದ ಇದೊಂದು ಆಸೆಯು ಮೆಲ್ಲಗೆ ಕರಗಲಾರಂಭಿಸಿದೆ. ಸುತ್ತಲೂ ಕತ್ತಲು ಬೆಳೆಯಲಾರಂಭಿಸಿದೆ.
.....................................................................................................................................................................
             ಆ ದಿನವೂ ಹೀಗೆ ಕುಳಿತಿದ್ದೆ. ಇದೇ ಕತ್ತಲು ಹಾಸಿಗೆ ಹಾಸಿಕೊಂಡು ಕಂಬಳಿ ಎಳೆದುಕೊಳ್ಳಲು ಸಜ್ಜಾಗುತ್ತಿತ್ತು. ಆಫೀಸ್ ನೊಳಗೆ ಆ ಹೊತ್ತಿನಲ್ಲಿ ನನ್ನನ್ನು ಬಿಟ್ಟರೆ ಒಂದು ಸೊಳ್ಳೆಯೂ ಇರಲಿಲ್ಲ. ಕಿಷ್ಕಿಂದೆಯಂಥ ನನ್ನ ಚೇಂಬರ್ ನೊಳಗೆ  ಏರ್ ಕಂಡೀಶನ್ಡ್ ಚಳಿ ತನ್ನ ಅದಿಪಥ್ಯವನ್ನು ಸಾರುತ್ತಿತ್ತು. ನನ್ನ ಮನಸ್ಸಿನೊಳಗೆ ಬೆಂಕಿಯೊಂದು ಸಣ್ಣಗೆ ಬೆಳೆಯತೊಡಗಿತ್ತು. " ಇನ್ನೂ ಎಷ್ಟು ದಿನಾ ಅಂತ ಸಹಿಸಿಕೊಳ್ಳಲಿ...ಇನ್ನು ಸುಮ್ಮನಿರಬಾರದು". ಹನ್ನೊಂದನೇ ಸಾರಿ ಹೇಳಿಕೊಂಡೆ. ನನಗಾಗಿರುವ ಅನ್ಯಾಯವನ್ನು ಈಕೂಡಲೇ ಅಮೆರಿಕಾದಲ್ಲಿರುವ ಮೇಲಧಿಕಾರಿಗಳಿಗೆ ತಿಳಿಸಿಬಿಡಬೇಕು. ನನ್ನ ಕಷ್ಟಗಳನ್ನೆಲ್ಲ ಸಂಕ್ಷಿಕ್ತಗೊಳಿಸಿ ಒಂದು ಮೇಲ್ ಸಿದ್ದಗೊಳಿಸಿದ್ದೆ. send ಕ್ಲಿಕ್ ಮಾಡಿದ್ದರೆ ಮರುಕ್ಷಣದಲ್ಲೇ ನನ್ನ ಅಳಲು ಅಮೆರಿಕದಲ್ಲಿ ಮೊಳಗಿರುತ್ತಿತ್ತು. ಆದರೆ ಅಂದು ನನ್ನ ಬೆರಳುಗಳು ಚಲನೆಯನ್ನೇ ಕಳೆದುಕೊಂಡಿರುವಂತೆ ಕೀಲಿಮಣೆಯ ಮೇಲೆ ಬಿದ್ದಿದ್ದವು. ನನ್ನನ್ನು ಆ ದಿನ ತಡೆದಿದ್ದಾದರು ಏನು...ಭಯ? ಇರಬಹುದೇನೋ....."ಎಲ್ಲಿ ಅವರಿಗೂ ನನ್ನ ಕಷ್ಟ ಅರ್ಥವಾಗದಿದ್ದರೆ!! ನಾನೂ ಮಾಡಿದ್ದೆ ತಪ್ಪೆನ್ನಿಸಿ ಕೆಲಸದಿಂದ ತೆಗೆದು ಹಾಕಿದರೆ? ಯಾಕ್ಕಿದ್ದೀತು....ಬೇಡ ಬಿಡು. ಈಗಲೇ ಬೇಡ. ಇನ್ನೂ ಸ್ವಲ್ಪ ದಿನ ಇದೇ ಚಿಲ್ಲರೆ ಸಂಬಳಕ್ಕೆ ದುಡಿಯೋಣ. ನೋಡೋಣ ಬರುವ ವರ್ಷವಾದರೂ increment ಮಾಡಬಹುದೇನೋ. ಇದೊಂದು ಬಾರಿ ಸಹಿಸಿಕೊಂಡು ಬಿಡೋಣ". ಮನಸ್ಸಿಗೆ ಸಮಾಧಾನ ಹೇಳಿದ್ದೆ. ಮನಸ್ಸಿನ ಬೆಂಕಿ ಕ್ಷೀಣಿಸತೊಡಗಿದ್ದೆ...ಹೊರಗಿನ ಚಳಿ ಪರಿಣಾಮ ಬಿರತೊಡಗಿತ್ತು. ಕಿಷ್ಕಿಂದೆಯಿಂದ ಹೊರಬಿದ್ದು ಬಾಗಿಲ್ಲಲ್ಲಿ ಕಳ್ಳ ನಿದ್ದೆ ಮಾಡುತ್ತಿದ್ದ ಸೆಕ್ಯೂರಿಟಿಯನ್ನು ಎಬ್ಬಿಸಿ ಅವನ ಕೈಗೆ ಚೇಂಬರ್ ನ ಕೀಲಿ ಕೊಟ್ಟು. ಬೈಕ್ ಏರಿಕೊಂಡು ಬೀದಿಗೆ ಬಿದ್ದೆ.

                  ಆ ದಿನ ಬೆಂಗಳೂರಿನ ರಸ್ತೆಗಳು ಎಂದಿಗಿಂತ ನಿರ್ಜನವಾಗಿ ಕಂಡವು. ದಾರಿಗುಂಟ ಇದ್ದಿದ್ದಿದ್ದು ನನ್ನ ಬೈಕ್ ನ ಕೀರಲು ಸ್ವರ, ಚಳಿ, ಕತ್ತಲು ಮತ್ತು ನನ್ನ ಏಕಾಂತ. ಈ ಏಕಾಂತ ನನಗೆ ಹೊಸದೇನೂ ಅಲ್ಲ. ಬಹಳ ದಿನಗಳಿಂದ ಅದು ನನ್ನ ನಿತ್ಯ ಸಂಗಾತಿ. ನನಗೆ ಹೇಳಿಕೊಳ್ಳುವಂಥ ಗೆಳೆಯರು ಯಾರೂ ಇರಲಿಲ್ಲ. ಇದ್ದ ಒಬ್ಬ room mate ಕೂಡ ಕೆಲ ದಿನಗಳ ಹಿಂದೆ ಮದುವೆ ಮಾಡಿಕೊಂಡು ಬೇರೆ ಮನೆ ಮಾಡಿದ್ದ. ಅವನೊಂದಿಗೂ ನನಗೆ ಅಂಥಹ ದೋಸ್ತಿ ಇರಲಿಲ್ಲ. ಏನೋ ಜೊತೆಯಲ್ಲಿ ಇರಬೇಕು....ಇದ್ದ, ಅಷ್ಟೇ. ಆದರೆ ಅವನಲ್ಲಿ ನನ್ನ ಬಗ್ಗೆ  ಕೆಲವು ಅಸಹನೆಗಳಿದ್ದವೆಂದು ತಿಳಿದಿದ್ದು ಅವನು ರೂಂ ಬಿಟ್ಟು ಹೋಗುವ ಹಿಂದಿನ ದಿನ ರಾತ್ರಿ ಕುಡಿದು ಬಂದು ಮಾತನಾಡತೊಡಗಿದ ಮೇಲೆಯೇ... " ನಿನ್ನೊಂದಿಗೆ ಯಾರೂ ಬದುಕಲಾರರು ಕಣೋ. ನಾನೇ ಅದು ಹೇಗೋ ಇಷ್ಟು ದಿನ adjust ಮಾಡಿಕೊಂಡಿದ್ದೆ" ಎಂಬಂಥಹ ಮಾತುಗಳನ್ನು ಆಡಿ ಎದ್ದು ಹೋಗಿದ್ದ. ಅವನನ್ನು ನಿಲ್ಲಿಸಿ ಕೇಳಬೇಕೆಂದಿದ್ದೆ...." ಅದೇನು ನನ್ನಲ್ಲಿ ಅಂಥಹ ಅಸಹನೀಯ ಗುಣಗಳು ಇರುವುದೆಂದು ಹೇಳಿ ಹೋಗು". ಕೇಳಲಿಲ್ಲ. ಕೇಳಲಾಗಲಿಲ್ಲ. ಆ ದಿನವೂ ನನ್ನನ್ನು ಕಾಡಿದ್ದು ಅದೇ ಭಯ! ' ಇರಬಹುದೇನೋ, ಯಾಕೆ ಅವನ ಬಾಯಿಂದ ಕೇಳಿ ಅಪಸವ್ಯಕ್ಕೀಡಾಬೇಕು '. ಎಂಬ ಹಿಂಜರಿಕೆ, ಭಯ ನನ್ನನ್ನು ತಡೆದಿತ್ತು. ಇದೇ ಥರ ನನ್ನಿಂದ ಕೈ ಬಿಡಿಸಿಕೊಂಡು ಹೋದ ಮತ್ತೊಬ್ಬರೆಂದರೆ ಅದು 'ಅವಳು'. "ನಿನ್ನೊಂದಿಗೆ ಇನ್ನು ಸಾಕು ಕಣೋ" ಎಂದು ಕಟ್ಟಿದ್ದ ಮರಳ ಮನೆಯನ್ನು ಒದ್ದು  ಅರ್ಧದಲ್ಲಿಯೇ ಆಟ ಬಿಟ್ಟು ಹೋಗುವ ಮಗುವಿನಂತೆ ಹೊರಟು ಹೋಗಿದ್ದಳು. " ಯಾಕೆ?" ಎಂದು ಕೇಳಬೇಕೆನಿಸಿರಲಿಲ್ಲ. ಕಾರಣ ಸ್ಪಷ್ಟವಾಗಿಯೇ ಇತ್ತು. ಅವಳಿಗೆ  ಭವಿಷ್ಯದ ಬಗ್ಗೆ ಮುಂದಾಲೋಚನೆ ಇತ್ತು. ಹೋದಳು. ಈಗ ಅವಳು ಅಮೇರಿಕಾದ ಯಾವುದೊ ಒಂದು software ಗೆ ಹೆಂಡತಿಯಾಗಿರಬಹುದು. ನಂದು ಬಿಡಿ, 'ಭವಿಷ್ಯದ ಬಗ್ಗೆ ಮುಂದಾಲೋಚನೆ' ದೂರದ ಮಾತಾಯಿತು....ಅಸಲಿಗೆ ನಂದೊಂದು ಭವಿಷ್ಯವಿದೆ ಎನ್ನುವ ಅನುಮಾನ ಅಂದಿಗೂ ಇತ್ತು, ಇಂದಿಗೂ ಇದೆ. ಆದರೆ ಅವಳಿಗೆ ಕೆಲವೊಂದು ವಿಷಯಗಳು ಹೇಳಬೇಕಿದ್ದವು. 'ನಾನೂ ಅವಳನ್ನು ಈ ಪ್ರಪಂಚದ ಎಲ್ಲಾದಿಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ' ಎಂದು ಎಲ್ಲರೆದುರು ಕೂಗಿ ಹೇಳಬೇಕಿತ್ತು. ' ನೀನೆ ನನ್ನ ಭವಿಷ್ಯ ಕಣೇ' ಎಂದು ಅವಳ ಕಿವಿಯಲ್ಲಿ ಮೆಲ್ಲಗೆ ಉಸುರಬೇಕೆಂದಿದ್ದೆ....ಹೇಳಲಾಗಲಿಲ್ಲ. ಇಂಥಹ ಎಷ್ಟೋ ವಿಷಯಗಳು ಹೇಳಬೇಕೆಂದವರಿಗೆ ಹೇಳಲಾಗದೆ ಮನಸ್ಸಿನಲ್ಲಿಯೇ ಉಳಿದುಹೋಗಿ  ಎದೆಯ ಭಾರ ಜಾಸ್ತಿಯಾಗತೊಡಗಿತ್ತು. ಹೇಳಿಕೊಂಡು ಹಗುರಾಗೋಣವೆಂದರೆ ಕೇಳಿಸಿಕೊಳ್ಳಲು ನನಗ್ಯಾರು ಇರಲಿಲ್ಲ. ಅಮ್ಮ ತಂಗಿಯ ಮನೆಯಲ್ಲಿ ಆರಾಮಾಗಿ ಇದ್ದಾಳೆ. ತಂಗಿಗೆ ಸುಖವಾಗಿ ನೋಡಿಕೊಳ್ಳುವ ಗಂಡನಿದ್ದಾನೆ. ಅವರಿಬ್ಬರಿಗೂ ನನ್ನ ನೆನಪಾಗುವುದು ವರ್ಷಕ್ಕೊಮ್ಮೆ ಬರುವ ತಂದೆಯ ಪೂಜೆ ದಿನ ಮಾತ್ರ.  

                 ಆ ದಿನ ಎಕಾಂತವೆಂಬ ಗಾಯಕ್ಕೆ  ನೆನಪುಗಳು ಉಪ್ಪು ಖಾರ ಸವರುತ್ತಿದ್ದವು. ಕೋಣೆಯಲ್ಲಿ ನನ್ನೊಬ್ಬನನ್ನೇ ಕೂಡಿಹಾಕಿಕೊಂಡು ಈ ನೆನಪುಗಳು ಎಲ್ಲ ದಿಕ್ಕುಗಳಿಂದಲೂ ದಾಳಿ ಮಾಡತೊಡಗಿದ್ದವು. ಈ ನೆನಪುಗಳಿಂದ ತಪ್ಪಿಸಿಕೊಳ್ಳಲು ನನಗಿದ್ದ ಒಂದೇ ಒಂದು ದಾರಿಯೆಂದರೆ ನನ್ನನ್ನು ನಾನು ತೆರೆದುಕೊಳ್ಳುವುದು. ನನ್ನ ಮನಸ್ಸಿನ ಭಾರವನ್ನೆಲ್ಲ ಇಳಿಸಬೇಕು, ಭಾವನೆಗಳನ್ನೆಲ್ಲ ಗೂಡಿನಿಂದ ಹಾರಿ ಬಿಡಬೇಕು. ನಾನಿನ್ನು ಯಾವುದರಿಂದಲೂ, ಯಾರಿಂದಲೂ ಓಡಿಹೋಗಬಾರದು. ಜಗತ್ತಿನ ಕಟು ಸತ್ಯವನ್ನೆಲ್ಲ ಎದುರಿಸಿ ನಿಲ್ಲಬೇಕು. "ಹಾಕು, ನಿನ್ನಲ್ಲಿರುದೆಲ್ಲವನ್ನು ಹೊರ ಹಾಕು' ಎಂದು ನನಗೆ ನಾನೇ ಹೇಳಿಕೊಂಡು ಎದ್ದು  laptop ಬಿಚ್ಚಿಕೊಂಡು ಕುಳಿತೆ. . ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲು ಇನ್ನೊಬ್ಬರನ್ನು ಹುಡುಕಿಕೊಂಡು ಹೋಗಬಾರದು. ಯಾರು ಕೇಳಲಿ ಬಿಡಲಿ ನನಗನಿಸಿದ್ದನ್ನು ನಾನು ಹೇಳಬೇಕು.... ಕೊನೆಯಪಕ್ಷ ನನಗಾಗಿ ನಾನು ಹೇಳಿಕೊಳ್ಳಬೇಕು. ನನ್ನ ಮನಸ್ಸಿನ ಮಾತುಗಳಿಗೆಲ್ಲ ದನಿಯಾಗಲು ಒಂದು ಬ್ಲಾಗ್ creat ಮಾಡಿದೆ. ಅದಕ್ಕೆ ' ಕನ್ನಡಿ' ಎಂದು ಹೆಸರಿಟ್ಟೆ. ಆ ಬ್ಲಾಗನಲ್ಲಿ ನಾನು ಹೇಳಿಕೊಳ್ಳಬೇಕೆಂದಿರುವ ಎಲ್ಲವನ್ನು ಬರೆಯಬೇಕೆಂದು ನಿರ್ಧರಿಸಿದ್ದೆ......  ಆದರೆ ಬರೆಯಲಿಲ್ಲ. ಏನೂ ಬರೆಯಲಿಲ್ಲ. ಪದಗಳು ಕೈಗೆ ಸಿಗದೇ ಅವಿತುಕೊಂಡವು..." ಛೆ! ಅವಕ್ಕೂ ನಾನೆಂದರೆ ತಿರಸ್ಕಾರ ". ಆ ದಿನ ಮನಸ್ಸು ತುಂಬಾ ನೋವುಂಡಿತ್ತು. ನಾನು ಮಾಡಬಹುದಾಗಿದ್ದು ಒಂದೇ ಒಂದು - ಅದು ನಿದ್ದೆ - 'ಅದಾದರೂ ನನ್ನ ಹತ್ತಿರ ಸುಳಿಯುತ್ತದೆಯೇ ?'....ಯೋಚಿಸುತ್ತಾ ಹಾಸಿಗೆಯ ಮೇಲೆ ಉರುಳಿದೆ. ಕೋಣೆಯ ಕತ್ತಲಲ್ಲಿ  ಅದೆಲ್ಲಿ ಅವಿತು ಕುಳಿತಿತ್ತೋ ನಿದ್ರೆ...ಒಮ್ಮೆಲೇ ಆವರಿಸಿತು. ಅಂಥಹ ನಿದ್ರೆ ನನಗೆಂದೂ ಬಂದಿದ್ದಿಲ್ಲ............


                  ಆ ರಾತ್ರಿ ನಾನು ಸತ್ತು ಹೋದೆ....!!!!

                                                                 ( ಮುಂದುವರೆಯುತ್ತದೆ )