ಭಾನುವಾರ, ನವೆಂಬರ್ 22, 2009

ದೀಪವಿರದ ದಾರಿಯಲ್ಲಿ - ೨.





                                          ಹೌದು, ಆ ರಾತ್ರಿ ನಾನು ಸತ್ತು ಹೋದೆ.

     **********
ಹಾಸಿಗೆಯಲ್ಲಿ ಉರುಳಿದವನಿಗೆ ಅದ್ಯಾವ ಹೊತ್ತಿನಲ್ಲಿ ನಿದ್ದೆ ಹತ್ತಿತೆಂದು ನನಗೆ ಗೊತ್ತಿಲ್ಲ. ನನ್ನ ಜೀವನ ಕೊನೆಯ ನಿದ್ದೆಯಾಗಿತ್ತು ಅದು. ಅಷ್ಟೊಂದು ಘಾಡವಾಗಿ ನಾನೆಂದೂ ಮಲಗಿದ್ದಿಲ್ಲ ಅನ್ಸಿಸುತ್ತದೆ. ಮಧ್ಯದಲ್ಲಿ ಅದೊಮ್ಮೆ ಎಚ್ಚರವಾಯಿತು. ಏನೋ ಒಂದು ರೀತಿಯ ಸಂಕಟ. ಉಸಿರಾಡಲು ಆಗುತ್ತಿಲ್ಲ. ಬಾಯಿಂದಲೂ ಗಾಳಿಯನ್ನು ಎಳೆದುಕೊಳ್ಳಲು ಪ್ರಯತ್ನಿಸಿದ್ದೆ....ಊಹುಂ, ಆಗಲಿಲ್ಲ. ನನ್ನ ಎಡಗೈ ಮುಷ್ಠಿ ಹಾಸಿಗೆಯನ್ನು ಬಲವಾಗಿ ಹಿಡಿದುಕೊಂಡಿತ್ತು. ಬಲಗೈ ಎದೆಯ ಮೇಲೆ ಹರಿದಾಡತೊಡಗಿತ್ತು. ದೇಹ ಮೇಲೇರಿ ಮೇಲೇರಿ ಕೆಳಗಿಳಿಯುತ್ತಿತ್ತು. ಕೆಲ ಕ್ಷಗಳ ನಂತರ ಕಣ್ಣು ಮಂಜಾಗತೊಡಗಿದವು. ಅಷ್ಟೇ, ನಂತರ ಘಾಡವಾದ ಕತ್ತಲೊಂದು ಆವರಿಸಿಕೊಳ್ಳತೊಡಗಿತ್ತು....ಯಾರೋ ಕಡುಗಪ್ಪು ಕಂಬಳಿಯನ್ನು ಮುಖದ ಮೇಲೆ ಹೊದೆಸಿದಂತೆ. ನಾನು ಕಣ್ಣು ಮುಚ್ಚತೊಡಗಿದೆ. ಮುಚ್ಚಿದೆ. ಫಳ್...... ಆಗಲೇ ಕಂಡಿದ್ದು ಆ ಬೆಳಕು. ಬೆಳಕೆಂದರೆ ಅಂತಿಂಥ ಬೆಳಕಲ್ಲ.....ಅಲ್ಲಿ ಆ ಬೆಳಕನ್ನು ಬಿಟ್ಟು ಬೇರೇನೂ ಕಾಣದಂಥ ಬೆಳಕು. ನಾನು ನಡೆಯುತ್ತಿದ್ದೇನೆ....ಬೆಳಕಿನೊಳಗೆ. ರಸ್ತೆಯಿಲ್ಲ, ಫೂಟ್ ಪಾಥ್ ಇಲ್ಲ, ಗಿಡ-ಮರಗಳಿಲ್ಲ, ಕಟ್ಟಡಗಳಿಲ್ಲ..... ಅಲ್ಲಿದ್ದಿದ್ದು ಕೇವಲ ಬೆಳಕು.

                 ನಾನು ಹಾಗೆ ಅದೆಷ್ಟು ಹೊತ್ತು, ಅದೆಷ್ಟು ದೂರ, ಅದ್ಯಾವ ದಿಕ್ಕಿಗೆ ನಡೆದೇನೋ ಗೊತ್ತಿಲ್ಲ.ಆದರೆ ಅದೊಂದು ಕಡೆ ನನ್ನನ್ಯಾರೋ ಜಗ್ಗಿ ನಿಲ್ಲಿಸದಂತಾಯಿತು. ಮುಂದೆ ಹೆಜ್ಜೆ ಇಡಲಾಗಲಿಲ್ಲ. ಕಣ್ಣ ಮುಂದೆ ಸಮುದ್ರದಂತೆ ಹರಡಿರುವ ಅದೇ ದಿವ್ಯವಾದ ಬೆಳಕು. ಏನು ಮಾಡಲು ತೋಚದೆ ನಿಂತವನಿಗೆ ಇದ್ದಕಿದ್ದಂತೆ ಕಿವಿಯ ಪಕ್ಕ ಯಾರದೋ ಉಸಿರು ತಾಕಿದಂತಾಗಿ ಬೆಚ್ಚಿ ಬಿದ್ದೆ. ನಂತರ ಸ್ಪಷ್ಟವಾದ ದ್ವನಿಯೊಂದು ಪಿಸುಮಾತಿನಲ್ಲಿ ಹೇಳತೊಡಗಿತು.
" ನಿನಗೆ ಮುಂದೆ ಹೋಗಲು ಅನುಮತಿ ಇಲ್ಲ "
" ಯಾಕೆ? ನಾನೆಲ್ಲಿದ್ದೇನೆ? ನೀನು ಯಾರು? " ಕೇಳಿದೆ.
" ಪರವಾಗಿಲ್ಲ ಕಣಯ್ಯಾ, ನೀನೂ ಪ್ರಶ್ನೆಗಳನ್ನು ಕೇಳ್ತಿದ್ದಿಯಲ್ಲ !!! ಇದೆ ರೀತಿ ನೀನು 'ಅಲ್ಲಿಯೇ' ಕೇಳಿದ್ದಿದ್ದರೆ ನಿನಗೆ ಈ ಗತಿ ಬಂದಿರೋದಲ್ಲ"
" ಅಲ್ಲಿಯೇ ಅಂದರೆ?! "
" ನೀನು ದೇಹದೊಂದಿಗಿದ್ದಾಗ.... ಅಂದರೆ ಭೂಮಿಯಲ್ಲಿದ್ದಾಗ."
ಹಾಗಾದರೆ ಇದು ಭೂಮಿಯಲ್ಲವೇ?! ನಾನು ದೇಹದೊಂದಿಗಿಲ್ಲವೇ?! ನನ್ನ ಕೈಗಳನ್ನು ನೋಡಿಕೊಂಡೆ.... ಎಲ್ಲಿದೆ ಕೈ. ಕೆಳಗೆ ಕಂಡಿದ್ದೆಲ್ಲ ಅದೇ ಬೆಳಕು. ಕಾಲು, ಎದೆ, ಹೊಟ್ಟೆ.... ಊಹುಂ, ಏನೂ ಕಾಣುತ್ತಿಲ್ಲ. ಕಡೆಯಪಕ್ಷ ನನ್ನ ಮುಖವಾದರೂ ಇದೆಯೇ... ಮುಟ್ಟಿ ನೋಡಿಕೊಳ್ಳುವ ಧೈರ್ಯವಾಗಲಿಲ್ಲ. ಈಗ ನಾನು ಏನೂ ಅಲ್ಲ... ನನ್ನದು ಅಂತ ಏನೂ ಇಲ್ಲ, ನನ್ನ ದೇಹ ಕೂಡ ನನ್ನೊಂದಿಗಿಲ್ಲ. ನಾನು ಆ ಬೆಳಕಿನಲ್ಲಿ ಬೆಳಕಾಗಿ ಹೋಗಿದ್ದೆನೆಯೇ?!! ದೇವರೇ, ನನಗೆ ಹುಚ್ಚು ಹಿಡಿಯುತ್ತಿದೆಯೇನೋ ಅನ್ನಿಸತೊಡಗಿತ್ತು.
" ಮನಸ್ಸಿನಲ್ಲಿ ಏನೂ ಇಟ್ಟುಕೊಳ್ಳಬೇಡ. ಅದೇನು ಕೇಳು" ಮತ್ತೆ ಕೇಳಿಸಿತು ದ್ವನಿ.
" ನಾನು ಏನೂ?! " ಅಳುತ್ತಿದ್ದೆನೇನೋ, ಗೊತ್ತಾಗುತ್ತಿಲ್ಲ.
" ನೀನೊಂದು ಆತ್ಮ. ದೇಹ ಬಿಟ್ಟು ಬಂದ ಆತ್ಮ."
ಅಂದರೆ ನಾನು ಸತ್ತು ಹೋದೆನೆ?!! ಕೋಣೆಯಲ್ಲಿ ಒಬ್ಬನೇ ಮಲಗಿಕೊಂಡಲ್ಲೇ ಸತ್ತು ಹೋಗಿದ್ದೆನೆಯೇ?! ನಾನು ಸತ್ತಿದ್ದು ಯಾರಿಗಾದರು ಗೊತ್ತಾಗಿದೆಯೋ ಇಲ್ಲವೋ. ಗೊತ್ತಾಗಲಿಲ್ಲವೆಂದರೆ ನನ್ನ ದೇಹ ಅಲ್ಲಿಯೇ ಕೊಳೆತು ಹೋಗಿಬಿಟ್ಟರೆ!!
" ಸತ್ತ ಮೇಲೆಯೂ ದೇಹದ ಬಗ್ಗೆ ಚಿಂತೆ ಮಾಡುತ್ತಿರುವೆಯೆಲ್ಲ.... ನೀವೆಲ್ಲ ಇಷ್ಟೇ ಕಣ್ರಯ್ಯ."
ಹೌದಲ್ಲ?! ಅಷ್ಟಕ್ಕೂ ನಾನು ಸತ್ತಿದಕ್ಕೆ ನಾನೊಬ್ಬನೇ ದುಖ್ಖಃ ಪಡಬೇಕು. ನನಗಾಗಿ ಅಳುವವರು ಅಲ್ಲ್ಯಾರು ಇಲ್ಲ. ಅವರಿಗೆ ಗೊತ್ತಾದರೆಷ್ಟು ಬಿಟ್ಟರೆಷ್ಟು.
" ಸರಿ, ಮುಂದೇನು. ನಾನು ಈಗ ಏನೂ ಮಾಡಬೇಕು? ನನ್ನನೆಲ್ಲಿ ಕರೆದು ಕೊಂಡು ಹೋಗುತ್ತೀರಿ? ಸ್ವರ್ಗ ಅಥವಾ ನರಕ? ಇಲ್ಲಿ ನನಗೇನು ಕಾಣುತ್ತಿಲ್ಲ.... ಎಲ್ಲ ಬೆಳಕು ಬೆಳಕು. ನೀವು ಕಾಣುತ್ತಿಲ್ಲ. ನನಗೆ ದೇವರ ಹತ್ತಿರ ಕರೆದುಕೊಂಡು ಹೋಗುತ್ತೀರಾ?" ಅದ್ಯಾಕೋ ಗೊತ್ತಿಲ್ಲ.... ನನಗೆ ಖುಷಿಯಾಗ ತೊಡಗಿತ್ತು.
" ಮಗು, ನೀನೆಲ್ಲೂ ಹೋಗುವ ಹಾಗಿಲ್ಲ"
" ಅಂದರೆ?!!"
" ಹೌದು ಮಗು, ನಿನಗೆ ಮುಂದೆ ಹೋಗಲು ಅನುಮತಿಯನ್ನು ನಿರಾಕರಿಸಲಾಗಿದೆ"
ನಿರಾಕರಿಸಲಾಗಿದೆ ಅಂದರೆ ಏನರ್ಥ? ಹಾಗಾದರೆ ನಾನೆಲ್ಲಿ ಹೋಗಬೇಕು? ಈ ಬೆಳಕಿನಲ್ಲಿ ಮಾತ್ರ ಇರಲಾರೆ....ಇದು ನನಗೆ ಹುಚ್ಚು ಹಿಡಿಸುತ್ತಿದೆ. ನಂಗ್ಯಾವತ್ತು ಇಷ್ಟೊಂದು ಪ್ರಶ್ನೆಗಳು ಬಂದಿದ್ದಿಲ್ಲ.
" ಅದೇನು ಅಂತ ಸರಿಯಾಗಿ ಹೇಳಿ ಸ್ವಾಮಿ"
" ಮಗು, ನೀನೊಂದು ಅತೃಪ್ತ ಆತ್ಮ. ನೀನು ಕೇವಲ ದೇಹವನ್ನು ಮಾತ್ರ ಬಿಟ್ಟು ಬಂದಿದ್ದೀಯ. ಮನಸ್ಸು ಇನ್ನೂ ಖಾಲಿಯಾಗಿಲ್ಲ. ಅಲ್ಲಿ ಸಾವಿರಾರು ಪ್ರಶ್ನೆಗಳು ಉತ್ತರ ಸಿಗದೇ ಹಾಗೆ ಕುಳಿತುಕೊಂಡಿವೆ. ಹೇಳಲಿಕ್ಕಿರುವ ವಿಷಯಗಳು ಹೇಳಬೇಕಾದವರಿಗೆ ಹೇಳಲಾಗದೆ ಅಲ್ಲಿಯೇ ಉಳಿದು ಹೋಗಿವೆ. ನೋವು, ದುಖ್ಖಃ, ಆಸೆ ಎಲ್ಲವೂ ಮನಸ್ಸಿನಲ್ಲಿ ಉಳಿದುಕೊಂಡಿವೆ. ಅದಕ್ಕಾಗಿಯೇ ನಿನಗಿನ್ನೂ ಈ ಬೆಳಕನ್ನು ಭರಿಸಲಾಗುತ್ತಿಲ್ಲ. ಅವೆಲ್ಲವನ್ನು ಕಳೆದುಕೊಂಡು ಬಾ. ನಿರ್ಮಲ ಮನಸ್ಸಿನೊಂದಿಗೆ ಬಾ. ಆಗ ನೀನು ಈ ಬೆಳಕಿನಲ್ಲಿ ಬೆಳಕಾಗಿ ಹೋಗುತ್ತೀಯ. ಅದೇ ಪ್ರತಿಯೊಂದು ಆತ್ಮದ ಅಂತ್ಯ."
" ಹೋಗು, ನೀನು 'ಅಲ್ಲಿಗೆ' ವಾಪಸ್ ಹೋಗು. ನಿನ್ನ ಮನಸನ್ನು ಹಗುರಾಗಿಸಿಕೊಂಡು ಬಾ. ಆದರೆ ಈಗ ನಿನಗಲ್ಲಿ ಯಾವುದೇ ದೇಹದ ಆಸರೆ ಮಾತ್ರ ಸಿಗುವುದಿಲ್ಲ ಅಷ್ಟೇ."
ಮತ್ತೆ ನನಗೆ ಆ ದ್ವನಿ ಕೇಳಿಸಲಿಲ್ಲ. ಎಷ್ಟೋ ಹೊತ್ತು ಅಲ್ಲಿಯೇ ನಿಂತಿದ್ದೆ. ಬೇರೆ ದಾರಿ ಇಲ್ಲ. ಈಗ ನಾನು ವಾಪಸ್ ಹೋಗಲೇ ಬೇಕಿತ್ತು. ಹಿಂತಿರುಗಿ ನಡೆಯ ತೊಡಗಿದೆ...........................................

                   ನನ್ನ ಕೋಣೆಯೆಲ್ಲ ಧೂಳು ತುಂಬಿ ಕೊಂಡಿತ್ತು. ಅಲ್ಲಿ ನನ್ನ ಯಾವುದೇ ಸಮಾನುಗಳಿರಲಿಲ್ಲ. ಅಲ್ಲಿ ಮನುಷ್ಯ ವಾಸದ ಯಾವುದೇ ಕುರುಹು ಗಳಿರಲಿಲ್ಲ. ನಾನು ಸುಮ್ಮನೆ ಅಲ್ಲಿಯೇ ನಿಂತಿದ್ದೆ. 'ಹೋಗುವುದಾದರೂ ಯಾರ ಹತ್ತಿರ? ಕೆಳುವುದಾದರು ಎನನ್ನು? ಹೇಳಬೇಕಾದಾಗಲೇ ಹೇಳಲಿಲ್ಲ. ಕೇಳಬೇಕಾದಾಗಲೇ ಕೇಳಲಿಲ್ಲ. ಈಗ ಅವರನ್ನು ಹೋಗಿ ಏನೂ ಕೇಳುವುದು. ಅಷ್ಟಕ್ಕೂ ನಾನು ಅವರ ಹತ್ತಿರವೇ ಯಾಕೆ ಹೇಳಿಕೊಳ್ಳಬೇಕು. ಒಟ್ಟಿನಲ್ಲಿ ಮನಸ್ಸಿನ ಮಾತುಗಳನ್ನು ಹೇಳಿಕೊಂಡು ಹಾಗುರಾಗಲು ಯಾರಾದರೇನು.' ಈ ಯೋಚನೆ ಬಂದಿದ್ದೆ ಕೊನೆಯಿಂದ ಹೊರಗೆ ಬಂದೆ. ಕೆಳಗಡೆ ಅಂಗಡಿಯ ಶೆಟ್ಟರು ನೆನಪಾದರು. ಅವಾಗಾವಾಗ ನನ್ನ ಕೆಲಸದ ಬಗ್ಗೆ ಕೇಳಿ ವಿಚಾರಿಸಿ ಕೊಳ್ಳುತ್ತಿದ್ದರು. ಅವರ ಅಂಗಡಿಯ ಮುಂದೆ ಹೋಗಿ ನಿಂತೆ. ಗಿರಾಕಿಗಳಿಲ್ಲದೆ ಶೆಟ್ರು ನಿದ್ದೆ ಹೊಡೆಯುತ್ತಿದ್ದರು. ಅವರ ಹೆಸರನ್ನು ಕೂಗಿದೆ. ನಿದ್ದೆ ಜೋರಿತ್ತೆಂದು ಕಾಣುತ್ತದೆ, ಅವರು ಏಳಲಿಲ್ಲ. ಮತ್ತೆರಡು ಬಾರಿ ಕೂಗಿದೆ, ಪ್ರಯೋಜನವಾಗಲಿಲ್ಲ. ಧೈರ್ಯ ಮಾಡಿ ಅಂಗಡಿಯ ಒಳಗೆ ಹೋಗಿ ಅವರನ್ನು ತಟ್ಟಿ ಎಬ್ಬಿಸಲು ಪ್ರಯತಿನಿಸಿದೆ.....ಅವರು ಮಿಸುಕಲಿಲ್ಲ. ಅವರು ಉಸಿರಾಡುತ್ತಿದಾರೋ ಇಲ್ಲೋ ಪರೀಕ್ಷಿಸ ಬೇಕೆನಿಸಿತು-ಪಾಪ, ಇವರು ನನ್ನಂತೆ ನಿದ್ದೆಯಲ್ಲೇ ಸತ್ತು ಹೋಗಿದ್ದರೆ?- ಅಷ್ಟರಲ್ಲೇ ಯಾರೋ ಗಿರಾಕಿ ಬರುವ ಹೆಜ್ಜೆ ಸಪ್ಪಳದಿಂದಾಗಿ ಶೆಟ್ರು ಎದ್ದು ಕುಳಿತರು. 'ಅಲಾ ಶೆಟ್ಟಿ, ನಾನು ಅಷ್ಟು ಹೊತ್ತಿನಿಂದ ಕೂಗಿದರು ಏನೂ ಕೇಳದಂತೆ ನಿದ್ದೆ ಮಾಡುತ್ತಿದ್ದವ ಈ ಗಿರಾಕಿ ಬರುವ ಹೆಜ್ಜೆ ಸಪ್ಪಳಕ್ಕೆ ಎದ್ದು ಕುಳಿತಿದ್ದಿಯಲ್ಲ.' ಅಂದುಕೊಂಡು. ಅವರನ್ನು ಮತ್ತೆರಡು ಬಾರಿ ಕರೆದೆ. ಅವರು ತಮ್ಮ ವ್ಯಾಪಾರದಲ್ಲಿ ಮುಳುಗಿದ್ದರು. ಸಿಟ್ಟು ಬಂದು ಸುಮ್ಮನೆ ಇಲ್ಲಿ ಕಾಲ ಹರಣ ಮಾಡಿ ಉಪಯೋಗವಿಲ್ಲವೆಂದು ಕೊಂಡು ಹೊರಗೆ ಬಂದೆ. ಪಕ್ಕದ ಮನೆಯ ಪುಟ್ಟಿ ಅಲ್ಲೇ ಆಡಿಕೊಳ್ಳುತ್ತಿದ್ದಳು. ಯಾವಾಗಲೂ 'ಅಂಕಲ್...ಅಂಕಲ್' ಎಂದು ಓಡಿ ಬರುತ್ತಿದ್ದವಳು ಇಂದು ನನ್ನ ಇರುವಿಕೆಯ ಅರಿವೇ ಇಲ್ಲದಂತೆ ತನ್ನ ಪಾಡಿಗೆ ತಾನು ಇದ್ದಳು. ನನಗೇಕೋ ಸಂಶಯ ಬರತೊಡಗಿತು. ರಸ್ತೆಯಲ್ಲಿ ಓಡಾಡುತ್ತಿದ್ದ ಒಂದಿಬ್ಬರನ್ನು ತಡೆದು ನಿಲ್ಲಿಸಲು ನೋಡಿದೆ. ಎಲ್ಲ ವ್ಯರ್ಥ. ಅವರ್ಯಾರಿಗೂ ನಾನು ಅಲ್ಲಿರುವುದು ಗೊತ್ತೇ ಇಲ್ಲವೆಂಬಂತೆ ಹೊರಟು ಹೋದರು. ಅಂದರೆ, ನನ್ನನು ಇವರ್ಯಾರು ನೋಡಲಾರರು. ನನ್ನ ಮಾತು ಇವರ್ಯಾರಿಗೂ ಕೇಳಲಾರದು. ನನ್ನ ಇರುವಿಕೆ ಇವರಿಗೆಲ್ಲ ಶೂನ್ಯ. ಅಯ್ಯೋ!! ಹಾಗಾದರೆ ನಾನು ನನ್ನ ಮನಸ್ಸಿನ ಮಾತುಗಳನ್ನು ಹೇಗೆ ಹೇಳಿಕೊಳ್ಳಬೇಕು. ದಿಕ್ಕುತೊಚದವಂತಾಗಿ ನಡು ರಸ್ತೆಯಲ್ಲಿ ನಿಂತುಕೊಂಡು ಗಟ್ಟಿಯಾಗಿ ಎದೆ ಹೊಡೆದು ಹೋಗುವಂತೆ ಕಿರುಚಿದೆ... ನನ್ನೋಳಗಿನಿಂದ ಬಸ್ಸೊಂದು ಹಾರ್ನ್ ಮಾಡುತ್ತಾ ಹಾದುಹೋಯಿತು.

                  ನನ್ನನ್ಯಾರು ನೋಡಲಾರರು, ಕೇಳಲಾರರು. ನನಗುಳಿದಿದ್ದ ದಾರಿಯೊಂದೇ. ಅದು ಬರೆಯುವುದು. ಹೌದು, ನಾನು ನನ್ನ ಮನಸ್ಸಿನಲ್ಲಿರುವುದೆಲ್ಲ ಬರೆದುಬಿಟ್ಟು ಹಗುರಾಗಿಬಿಡಬೇಕು. ಅದಕ್ಕಾಗಿ ನನ್ನ ಬ್ಲಾಗ್ ಇದೆ. ನನ್ನ 'ಕನ್ನಡಿ'. ಒಂದಲ್ಲ ಒಂದು ದಿನ ಅಪ್ಪಿ ತಪ್ಪಿ ಅದನ್ನು ಯಾರಾದರು ಓದೇ ಓದುತ್ತಾರೆ. ಓದದಿದ್ದರೂ ಸಹ ನನ್ನ ಮನಸ್ಸಿನ ಭಾವನೆಗಳನ್ನು ಆಗಲೇ ಹೇಳಿಕೊಂಡಂತೆ ಆಗಿರುತ್ತದೆ. ಇದು ನನಗಿರುವ ಕಡೇ ಆಯ್ಕೆ. ಸರಿ, ನನ್ನ ಆಫೀಸ್ ನ ಕಡೆಗೆ ಹೊರಟೆ. ಸೆಕ್ಯೂರಿಟಿಯವನು ಎದ್ದು ಸಲಾಂ ಹೊಡೆಯಲಿಲ್ಲ. ಅದೆಲ್ಲದರ ಬಗ್ಗೆ ಗಮನ ಕೊಡಲು ನನಗೆ ವ್ಯವಧಾನವಿಲ್ಲ. ನಾನು  ಬಾಗಿಲುಗಳನ್ನು ತೆರೆದುಕೊಂಡು ಹೋಗುತ್ತಿಲ್ಲ...ಸುಮ್ಮನೆ ನುಗ್ಗುತ್ತಿದ್ದೇನೆ. ನನ್ನ ಕಿಷ್ಕಿಂದೆಯನ್ನು ಹೊಕ್ಕೆ. ಟೇಬಲ್ ಮೇಲಿನ ನೇಮ್ ಪ್ಲೇಟ್ ನನ್ನ ಹೆಸರಿನ ಬದಲು ಬೇರೆ ಹೆಸರನ್ನು ಬರೆದುಕೊಂಡಿತ್ತು. ಹೋಗಿ ಕಂಪ್ಯೂಟರ್ ನ ಮುಂದೆ ಕುಳಿತೆ. ಕಂಪ್ಯೂಟರನ್ನು ಆನ್ ಮಾಡಲು ಬಟನ್ ಒತ್ತಿದೆ. ಊಹುಂ, ಬಟನ್ ಕೆಲಸ ಮಾಡುತ್ತಿಲ್ಲ....ಅಥವಾ ನನ್ನ ಬೆರಳಿನ ಒತ್ತಡ ಸಾಕಾಗುತ್ತಿಲ್ಲ. 'ಅಂದರೆ, ನಾನು ಏನನ್ನು ಹಿಡಿದುಕೊಳ್ಳಲು ಆಗುವುದಿಲ್ಲವೇ?..............ಅಂದರೆ, ನಾನಿನ್ನು ಹೀಗೆಯೇ ಇದ್ದು ಬಿಡಬೇಕೇ?...............ಅತೃಪ್ತ ಆತ್ಮವಾಗಿಯೇ ಉಳಿದು ಬಿಡಬೇಕೇ?.............. ಇಲ್ಲ ಇಲ್ಲ. ಹಾಗಾಗಬಾರದು. ನಾನು ಹೇಳಬೇಕು. ನನ್ನ ಮನಸ್ಸಿನ ಮಾತುಗಳನ್ನು, ಭಾವನೆಗಳನ್ನು ಒಂದೇ ಒಂದು ಸಾರಿ ಹೇಳಿಕೊಂಡು ಬಿಡಬೇಕು. ಪ್ಲೀಸ್ ದೇವರೇ, ನನ್ನನ್ನು ಹೀಗೆ ಕೈಬಿಡಬೇಡ'. ಮತ್ತೊಮ್ಮೆ ಪ್ರಯತ್ನಿಸಿದೆ....ಮತ್ತೊಮ್ಮೆ ಮತ್ತೊಮ್ಮೆ.....
...........................................................................................
                ಕಂಪ್ಯೂಟರ್ ಪರದೆಯನ್ನೇ ದಿಟ್ಟಿಸುತ್ತಿದ್ದೇನೆ. ಕೆಲವು ಗಂಟೆಗಳೇ ಕಳೆದು ಹೋಗಿವೆ. ಹೀಗೆ ಇನ್ನೆಷ್ಟು ಹೊತ್ತು ಕುಳಿತಿರುತ್ತೇನೋ ಗೊತ್ತಿಲ್ಲ. ನನ್ನ ಬೆರಳುಗಳು ಕೀಲಿಮಣೆಯ ಮೇಲೆ ಸುಮ್ಮನೆ ಹರಿದಾಡುತ್ತಿವೆ. ಆದರೆ ಪರದೆಯ ಮೇಲೆ ಮಾತ್ರ ಅಕ್ಷರಗಳು ಮೂಡಲು ಹಿಂದೇಟು ಹಾಕುತ್ತಿವೆ. ನನ್ನ ಬೆರಳುಗಳು ಹಾಕುತ್ತಿರುವ ಒತ್ತಡಕ್ಕೆ ಕೀಲಿಮಣೆ ಸ್ಪಂದಿಸುತ್ತಿಲ್ಲ. ನನ್ನಲ್ಲಿ ಉಳಿದಿದ್ದ ಇದೊಂದು ಆಸೆಯು ಮೆಲ್ಲಗೆ ಕರಗಲಾರಂಭಿಸಿದೆ. ಸುತ್ತಲೂ ಕತ್ತಲು ಬೆಳೆಯಲಾರಂಭಿಸಿದೆ.

                                                      ( ಮುಗಿಯಿತು )  
          

ಸೋಮವಾರ, ನವೆಂಬರ್ 16, 2009

ಹೀಗೊಂದು ಕೊಲೆ.

ಸರಿ, ನಾನೂ ಬರೆಯುತ್ತಿದ್ದೇನೆ ಕವಿತೆ.
ಪದಗಳ ಹಂಗಿಲ್ಲ, ಪ್ರಾಸ ಗೊತ್ತಿಲ್ಲ....
ಸ್ವಲ್ಪ ತ್ರಾಸಾದರು ಓದಿಕೊಳ್ಳಿ,
ಇದು ಮೊದಲ ಪ್ರಯತ್ನ.

ಆಯ್ತು, ವಿಷಯವಾದರೂ ಬೇಕಲ್ಲ ?
ತೆರೆದಿಟ್ಟುಕೊಂಡು ಕುಳಿತಿದ್ದೇನೆ ನೆನೆಪಿನ ಕಪಾಟು.
ಹುಡುಕುತ್ತಿದ್ದೇನೆ ಭಾವನೆಗಳನ್ನು..... ಕತ್ತಲಲ್ಲಿ.
ಛೆ! ಬರೆಯಲು ಯೋಗ್ಯವಾದದ್ದು ಯಾವುದು ಸಿಗುತ್ತಿಲ್ಲ.
ಸಹನೆ ತೀರಿ ಹೋಗುತ್ತಿದೆ.

ಕೈಗೆ ಸಿಗುವ ಭಾವವನ್ನು ಹಿಡಿದು, ಕೊಂದು
ಹಾಳೆಯ ಮೇಲೆ ಸಮಾಧಿ ಮಾಡಿ ಕವಿತೆಯನ್ನಾಗಿಸುವ
ಕ್ರೂರ ಹುನ್ನಾರ......... ಹೆಚ್ಚಾಗುತ್ತಿದೆ.
ಮನಸ್ಸು ಹುಚ್ಚಾಗುತ್ತಿದೆ.

ಅಯ್ಯೋ! ಬೇಡವೇ ಬೇಡ.
ಈ ಕವಿತೆಗಳ ಸಹವಾಸವೇ ಬೇಡ.
ಬರೆಯಲು ಕುಳಿತ ಮನಸ್ಸು ಕೊಲೆಗಾರನಾಗುತ್ತಿದೆ.
ಅಷ್ಟಕ್ಕೂ, ಭಾವನೆಗಳನ್ನು ಪದಗಳಿಗಿಳಿಸಹೋದರೆ-
- ಅದು ಕೊಲೆಯೇ..........

( P.S- ಕವಿತೆಗಳನ್ನು ಹೀಗೂ ಕೊಲೆಮಾಡಬಹುದು....ಹ್ಹೆ..ಹೇ...)

ದೀಪವಿರದ ದಾರಿಯಲ್ಲಿ...

                                         (ಭಾಗ-1)        

                 ಕಂಪ್ಯೂಟರ್ ಪರದೆಯನ್ನೇ ದಿಟ್ಟಿಸುತ್ತಿದ್ದೇನೆ. ಕೆಲವು ಗಂಟೆಗಳೇ ಕಳೆದು ಹೋಗಿವೆ. ಹೀಗೆ ಇನ್ನೆಷ್ಟು ಹೊತ್ತು ಕುಳಿತಿರುತ್ತೇನೋ ಗೊತ್ತಿಲ್ಲ. ನನ್ನ ಬೆರಳುಗಳು ಕೀಲಿಮಣೆಯ ಮೇಲೆ ಸುಮ್ಮನೆ ಹರಿದಾಡುತ್ತಿವೆ. ಆದರೆ ಪರದೆಯ ಮೇಲೆ ಮಾತ್ರ ಅಕ್ಷರಗಳು ಮೂಡಲು ಹಿಂದೇಟು ಹಾಕುತ್ತಿವೆ. ನನ್ನ ಬೆರಳುಗಳು ಹಾಕುತ್ತಿರುವ ಒತ್ತಡಕ್ಕೆ ಕೀಲಿಮಣೆ ಸ್ಪಂದಿಸುತ್ತಿಲ್ಲ. ನನ್ನಲ್ಲಿ ಉಳಿದಿದ್ದ ಇದೊಂದು ಆಸೆಯು ಮೆಲ್ಲಗೆ ಕರಗಲಾರಂಭಿಸಿದೆ. ಸುತ್ತಲೂ ಕತ್ತಲು ಬೆಳೆಯಲಾರಂಭಿಸಿದೆ.
.....................................................................................................................................................................
             ಆ ದಿನವೂ ಹೀಗೆ ಕುಳಿತಿದ್ದೆ. ಇದೇ ಕತ್ತಲು ಹಾಸಿಗೆ ಹಾಸಿಕೊಂಡು ಕಂಬಳಿ ಎಳೆದುಕೊಳ್ಳಲು ಸಜ್ಜಾಗುತ್ತಿತ್ತು. ಆಫೀಸ್ ನೊಳಗೆ ಆ ಹೊತ್ತಿನಲ್ಲಿ ನನ್ನನ್ನು ಬಿಟ್ಟರೆ ಒಂದು ಸೊಳ್ಳೆಯೂ ಇರಲಿಲ್ಲ. ಕಿಷ್ಕಿಂದೆಯಂಥ ನನ್ನ ಚೇಂಬರ್ ನೊಳಗೆ  ಏರ್ ಕಂಡೀಶನ್ಡ್ ಚಳಿ ತನ್ನ ಅದಿಪಥ್ಯವನ್ನು ಸಾರುತ್ತಿತ್ತು. ನನ್ನ ಮನಸ್ಸಿನೊಳಗೆ ಬೆಂಕಿಯೊಂದು ಸಣ್ಣಗೆ ಬೆಳೆಯತೊಡಗಿತ್ತು. " ಇನ್ನೂ ಎಷ್ಟು ದಿನಾ ಅಂತ ಸಹಿಸಿಕೊಳ್ಳಲಿ...ಇನ್ನು ಸುಮ್ಮನಿರಬಾರದು". ಹನ್ನೊಂದನೇ ಸಾರಿ ಹೇಳಿಕೊಂಡೆ. ನನಗಾಗಿರುವ ಅನ್ಯಾಯವನ್ನು ಈಕೂಡಲೇ ಅಮೆರಿಕಾದಲ್ಲಿರುವ ಮೇಲಧಿಕಾರಿಗಳಿಗೆ ತಿಳಿಸಿಬಿಡಬೇಕು. ನನ್ನ ಕಷ್ಟಗಳನ್ನೆಲ್ಲ ಸಂಕ್ಷಿಕ್ತಗೊಳಿಸಿ ಒಂದು ಮೇಲ್ ಸಿದ್ದಗೊಳಿಸಿದ್ದೆ. send ಕ್ಲಿಕ್ ಮಾಡಿದ್ದರೆ ಮರುಕ್ಷಣದಲ್ಲೇ ನನ್ನ ಅಳಲು ಅಮೆರಿಕದಲ್ಲಿ ಮೊಳಗಿರುತ್ತಿತ್ತು. ಆದರೆ ಅಂದು ನನ್ನ ಬೆರಳುಗಳು ಚಲನೆಯನ್ನೇ ಕಳೆದುಕೊಂಡಿರುವಂತೆ ಕೀಲಿಮಣೆಯ ಮೇಲೆ ಬಿದ್ದಿದ್ದವು. ನನ್ನನ್ನು ಆ ದಿನ ತಡೆದಿದ್ದಾದರು ಏನು...ಭಯ? ಇರಬಹುದೇನೋ....."ಎಲ್ಲಿ ಅವರಿಗೂ ನನ್ನ ಕಷ್ಟ ಅರ್ಥವಾಗದಿದ್ದರೆ!! ನಾನೂ ಮಾಡಿದ್ದೆ ತಪ್ಪೆನ್ನಿಸಿ ಕೆಲಸದಿಂದ ತೆಗೆದು ಹಾಕಿದರೆ? ಯಾಕ್ಕಿದ್ದೀತು....ಬೇಡ ಬಿಡು. ಈಗಲೇ ಬೇಡ. ಇನ್ನೂ ಸ್ವಲ್ಪ ದಿನ ಇದೇ ಚಿಲ್ಲರೆ ಸಂಬಳಕ್ಕೆ ದುಡಿಯೋಣ. ನೋಡೋಣ ಬರುವ ವರ್ಷವಾದರೂ increment ಮಾಡಬಹುದೇನೋ. ಇದೊಂದು ಬಾರಿ ಸಹಿಸಿಕೊಂಡು ಬಿಡೋಣ". ಮನಸ್ಸಿಗೆ ಸಮಾಧಾನ ಹೇಳಿದ್ದೆ. ಮನಸ್ಸಿನ ಬೆಂಕಿ ಕ್ಷೀಣಿಸತೊಡಗಿದ್ದೆ...ಹೊರಗಿನ ಚಳಿ ಪರಿಣಾಮ ಬಿರತೊಡಗಿತ್ತು. ಕಿಷ್ಕಿಂದೆಯಿಂದ ಹೊರಬಿದ್ದು ಬಾಗಿಲ್ಲಲ್ಲಿ ಕಳ್ಳ ನಿದ್ದೆ ಮಾಡುತ್ತಿದ್ದ ಸೆಕ್ಯೂರಿಟಿಯನ್ನು ಎಬ್ಬಿಸಿ ಅವನ ಕೈಗೆ ಚೇಂಬರ್ ನ ಕೀಲಿ ಕೊಟ್ಟು. ಬೈಕ್ ಏರಿಕೊಂಡು ಬೀದಿಗೆ ಬಿದ್ದೆ.

                  ಆ ದಿನ ಬೆಂಗಳೂರಿನ ರಸ್ತೆಗಳು ಎಂದಿಗಿಂತ ನಿರ್ಜನವಾಗಿ ಕಂಡವು. ದಾರಿಗುಂಟ ಇದ್ದಿದ್ದಿದ್ದು ನನ್ನ ಬೈಕ್ ನ ಕೀರಲು ಸ್ವರ, ಚಳಿ, ಕತ್ತಲು ಮತ್ತು ನನ್ನ ಏಕಾಂತ. ಈ ಏಕಾಂತ ನನಗೆ ಹೊಸದೇನೂ ಅಲ್ಲ. ಬಹಳ ದಿನಗಳಿಂದ ಅದು ನನ್ನ ನಿತ್ಯ ಸಂಗಾತಿ. ನನಗೆ ಹೇಳಿಕೊಳ್ಳುವಂಥ ಗೆಳೆಯರು ಯಾರೂ ಇರಲಿಲ್ಲ. ಇದ್ದ ಒಬ್ಬ room mate ಕೂಡ ಕೆಲ ದಿನಗಳ ಹಿಂದೆ ಮದುವೆ ಮಾಡಿಕೊಂಡು ಬೇರೆ ಮನೆ ಮಾಡಿದ್ದ. ಅವನೊಂದಿಗೂ ನನಗೆ ಅಂಥಹ ದೋಸ್ತಿ ಇರಲಿಲ್ಲ. ಏನೋ ಜೊತೆಯಲ್ಲಿ ಇರಬೇಕು....ಇದ್ದ, ಅಷ್ಟೇ. ಆದರೆ ಅವನಲ್ಲಿ ನನ್ನ ಬಗ್ಗೆ  ಕೆಲವು ಅಸಹನೆಗಳಿದ್ದವೆಂದು ತಿಳಿದಿದ್ದು ಅವನು ರೂಂ ಬಿಟ್ಟು ಹೋಗುವ ಹಿಂದಿನ ದಿನ ರಾತ್ರಿ ಕುಡಿದು ಬಂದು ಮಾತನಾಡತೊಡಗಿದ ಮೇಲೆಯೇ... " ನಿನ್ನೊಂದಿಗೆ ಯಾರೂ ಬದುಕಲಾರರು ಕಣೋ. ನಾನೇ ಅದು ಹೇಗೋ ಇಷ್ಟು ದಿನ adjust ಮಾಡಿಕೊಂಡಿದ್ದೆ" ಎಂಬಂಥಹ ಮಾತುಗಳನ್ನು ಆಡಿ ಎದ್ದು ಹೋಗಿದ್ದ. ಅವನನ್ನು ನಿಲ್ಲಿಸಿ ಕೇಳಬೇಕೆಂದಿದ್ದೆ...." ಅದೇನು ನನ್ನಲ್ಲಿ ಅಂಥಹ ಅಸಹನೀಯ ಗುಣಗಳು ಇರುವುದೆಂದು ಹೇಳಿ ಹೋಗು". ಕೇಳಲಿಲ್ಲ. ಕೇಳಲಾಗಲಿಲ್ಲ. ಆ ದಿನವೂ ನನ್ನನ್ನು ಕಾಡಿದ್ದು ಅದೇ ಭಯ! ' ಇರಬಹುದೇನೋ, ಯಾಕೆ ಅವನ ಬಾಯಿಂದ ಕೇಳಿ ಅಪಸವ್ಯಕ್ಕೀಡಾಬೇಕು '. ಎಂಬ ಹಿಂಜರಿಕೆ, ಭಯ ನನ್ನನ್ನು ತಡೆದಿತ್ತು. ಇದೇ ಥರ ನನ್ನಿಂದ ಕೈ ಬಿಡಿಸಿಕೊಂಡು ಹೋದ ಮತ್ತೊಬ್ಬರೆಂದರೆ ಅದು 'ಅವಳು'. "ನಿನ್ನೊಂದಿಗೆ ಇನ್ನು ಸಾಕು ಕಣೋ" ಎಂದು ಕಟ್ಟಿದ್ದ ಮರಳ ಮನೆಯನ್ನು ಒದ್ದು  ಅರ್ಧದಲ್ಲಿಯೇ ಆಟ ಬಿಟ್ಟು ಹೋಗುವ ಮಗುವಿನಂತೆ ಹೊರಟು ಹೋಗಿದ್ದಳು. " ಯಾಕೆ?" ಎಂದು ಕೇಳಬೇಕೆನಿಸಿರಲಿಲ್ಲ. ಕಾರಣ ಸ್ಪಷ್ಟವಾಗಿಯೇ ಇತ್ತು. ಅವಳಿಗೆ  ಭವಿಷ್ಯದ ಬಗ್ಗೆ ಮುಂದಾಲೋಚನೆ ಇತ್ತು. ಹೋದಳು. ಈಗ ಅವಳು ಅಮೇರಿಕಾದ ಯಾವುದೊ ಒಂದು software ಗೆ ಹೆಂಡತಿಯಾಗಿರಬಹುದು. ನಂದು ಬಿಡಿ, 'ಭವಿಷ್ಯದ ಬಗ್ಗೆ ಮುಂದಾಲೋಚನೆ' ದೂರದ ಮಾತಾಯಿತು....ಅಸಲಿಗೆ ನಂದೊಂದು ಭವಿಷ್ಯವಿದೆ ಎನ್ನುವ ಅನುಮಾನ ಅಂದಿಗೂ ಇತ್ತು, ಇಂದಿಗೂ ಇದೆ. ಆದರೆ ಅವಳಿಗೆ ಕೆಲವೊಂದು ವಿಷಯಗಳು ಹೇಳಬೇಕಿದ್ದವು. 'ನಾನೂ ಅವಳನ್ನು ಈ ಪ್ರಪಂಚದ ಎಲ್ಲಾದಿಕ್ಕಿಂತ ಹೆಚ್ಚಾಗಿ ಪ್ರೀತಿಸುತ್ತೇನೆ ' ಎಂದು ಎಲ್ಲರೆದುರು ಕೂಗಿ ಹೇಳಬೇಕಿತ್ತು. ' ನೀನೆ ನನ್ನ ಭವಿಷ್ಯ ಕಣೇ' ಎಂದು ಅವಳ ಕಿವಿಯಲ್ಲಿ ಮೆಲ್ಲಗೆ ಉಸುರಬೇಕೆಂದಿದ್ದೆ....ಹೇಳಲಾಗಲಿಲ್ಲ. ಇಂಥಹ ಎಷ್ಟೋ ವಿಷಯಗಳು ಹೇಳಬೇಕೆಂದವರಿಗೆ ಹೇಳಲಾಗದೆ ಮನಸ್ಸಿನಲ್ಲಿಯೇ ಉಳಿದುಹೋಗಿ  ಎದೆಯ ಭಾರ ಜಾಸ್ತಿಯಾಗತೊಡಗಿತ್ತು. ಹೇಳಿಕೊಂಡು ಹಗುರಾಗೋಣವೆಂದರೆ ಕೇಳಿಸಿಕೊಳ್ಳಲು ನನಗ್ಯಾರು ಇರಲಿಲ್ಲ. ಅಮ್ಮ ತಂಗಿಯ ಮನೆಯಲ್ಲಿ ಆರಾಮಾಗಿ ಇದ್ದಾಳೆ. ತಂಗಿಗೆ ಸುಖವಾಗಿ ನೋಡಿಕೊಳ್ಳುವ ಗಂಡನಿದ್ದಾನೆ. ಅವರಿಬ್ಬರಿಗೂ ನನ್ನ ನೆನಪಾಗುವುದು ವರ್ಷಕ್ಕೊಮ್ಮೆ ಬರುವ ತಂದೆಯ ಪೂಜೆ ದಿನ ಮಾತ್ರ.  

                 ಆ ದಿನ ಎಕಾಂತವೆಂಬ ಗಾಯಕ್ಕೆ  ನೆನಪುಗಳು ಉಪ್ಪು ಖಾರ ಸವರುತ್ತಿದ್ದವು. ಕೋಣೆಯಲ್ಲಿ ನನ್ನೊಬ್ಬನನ್ನೇ ಕೂಡಿಹಾಕಿಕೊಂಡು ಈ ನೆನಪುಗಳು ಎಲ್ಲ ದಿಕ್ಕುಗಳಿಂದಲೂ ದಾಳಿ ಮಾಡತೊಡಗಿದ್ದವು. ಈ ನೆನಪುಗಳಿಂದ ತಪ್ಪಿಸಿಕೊಳ್ಳಲು ನನಗಿದ್ದ ಒಂದೇ ಒಂದು ದಾರಿಯೆಂದರೆ ನನ್ನನ್ನು ನಾನು ತೆರೆದುಕೊಳ್ಳುವುದು. ನನ್ನ ಮನಸ್ಸಿನ ಭಾರವನ್ನೆಲ್ಲ ಇಳಿಸಬೇಕು, ಭಾವನೆಗಳನ್ನೆಲ್ಲ ಗೂಡಿನಿಂದ ಹಾರಿ ಬಿಡಬೇಕು. ನಾನಿನ್ನು ಯಾವುದರಿಂದಲೂ, ಯಾರಿಂದಲೂ ಓಡಿಹೋಗಬಾರದು. ಜಗತ್ತಿನ ಕಟು ಸತ್ಯವನ್ನೆಲ್ಲ ಎದುರಿಸಿ ನಿಲ್ಲಬೇಕು. "ಹಾಕು, ನಿನ್ನಲ್ಲಿರುದೆಲ್ಲವನ್ನು ಹೊರ ಹಾಕು' ಎಂದು ನನಗೆ ನಾನೇ ಹೇಳಿಕೊಂಡು ಎದ್ದು  laptop ಬಿಚ್ಚಿಕೊಂಡು ಕುಳಿತೆ. . ಮನಸ್ಸಿನ ಭಾವನೆಗಳನ್ನು ಹೇಳಿಕೊಳ್ಳಲು ಇನ್ನೊಬ್ಬರನ್ನು ಹುಡುಕಿಕೊಂಡು ಹೋಗಬಾರದು. ಯಾರು ಕೇಳಲಿ ಬಿಡಲಿ ನನಗನಿಸಿದ್ದನ್ನು ನಾನು ಹೇಳಬೇಕು.... ಕೊನೆಯಪಕ್ಷ ನನಗಾಗಿ ನಾನು ಹೇಳಿಕೊಳ್ಳಬೇಕು. ನನ್ನ ಮನಸ್ಸಿನ ಮಾತುಗಳಿಗೆಲ್ಲ ದನಿಯಾಗಲು ಒಂದು ಬ್ಲಾಗ್ creat ಮಾಡಿದೆ. ಅದಕ್ಕೆ ' ಕನ್ನಡಿ' ಎಂದು ಹೆಸರಿಟ್ಟೆ. ಆ ಬ್ಲಾಗನಲ್ಲಿ ನಾನು ಹೇಳಿಕೊಳ್ಳಬೇಕೆಂದಿರುವ ಎಲ್ಲವನ್ನು ಬರೆಯಬೇಕೆಂದು ನಿರ್ಧರಿಸಿದ್ದೆ......  ಆದರೆ ಬರೆಯಲಿಲ್ಲ. ಏನೂ ಬರೆಯಲಿಲ್ಲ. ಪದಗಳು ಕೈಗೆ ಸಿಗದೇ ಅವಿತುಕೊಂಡವು..." ಛೆ! ಅವಕ್ಕೂ ನಾನೆಂದರೆ ತಿರಸ್ಕಾರ ". ಆ ದಿನ ಮನಸ್ಸು ತುಂಬಾ ನೋವುಂಡಿತ್ತು. ನಾನು ಮಾಡಬಹುದಾಗಿದ್ದು ಒಂದೇ ಒಂದು - ಅದು ನಿದ್ದೆ - 'ಅದಾದರೂ ನನ್ನ ಹತ್ತಿರ ಸುಳಿಯುತ್ತದೆಯೇ ?'....ಯೋಚಿಸುತ್ತಾ ಹಾಸಿಗೆಯ ಮೇಲೆ ಉರುಳಿದೆ. ಕೋಣೆಯ ಕತ್ತಲಲ್ಲಿ  ಅದೆಲ್ಲಿ ಅವಿತು ಕುಳಿತಿತ್ತೋ ನಿದ್ರೆ...ಒಮ್ಮೆಲೇ ಆವರಿಸಿತು. ಅಂಥಹ ನಿದ್ರೆ ನನಗೆಂದೂ ಬಂದಿದ್ದಿಲ್ಲ............


                  ಆ ರಾತ್ರಿ ನಾನು ಸತ್ತು ಹೋದೆ....!!!!

                                                                 ( ಮುಂದುವರೆಯುತ್ತದೆ )

ಶನಿವಾರ, ಅಕ್ಟೋಬರ್ 31, 2009

ನವಿಲುಗರಿ ಮರಿ ಹಾಕಲೇ ಇಲ್ಲ.....



                   ಇವರು ಒಟ್ಟು ಮೂರು ಜನ ಅಕ್ಕ-ತಂಗಿಯರು. ಮೊದಲನೆಯವಳ ಹೆಸರು ಜ್ಯೋತಿ, ತಂಗಿಯ ಹೆಸರು ಶ್ರುತಿ, ಕೊನೆಯವಳು  ಪ್ರೀತಿ. ಇವರು ನಂಗೆ ಪರಿಚಯವಾಗಿದ್ದು ನಾನು ಒಂದನೇ ಕ್ಲಾಸಿನಲ್ಲಿರಬೇಕಾದರೆ. ನಮ್ಮ ತಂದೆ ನನ್ನನ್ನು ಇವರಿಗೆ ಪರಿಚಯಿಸಿದ್ದು. ಯಾಕೆಂದರೆ ನಾನು ಹೊಸದಾಗಿ ಸೇರಿದ್ದ  ಸ್ಕೂಲಿಗೆ ಇವರು ಆಗಲೇ ಹಳಬರಾಗಿದ್ದರು. ಅದಕ್ಕಾಗಿ ನಾನು ದಿನ ಇವರ ಜೊತೆಯಲ್ಲಿಯೇ ಸ್ಕೂಲಿಗೆ ಹೋಗಿ ಬರಬೇಕಿತ್ತು. ಹೀಗಾಗಿ ಇವರು ಒಂದು ರೀತಿಯಲ್ಲಿ ನನ್ನ ಫಸ್ಟ್ ಗರ್ಲ್ ಫ್ರೆಂಡ್ಸ್!! ನಾನು ಆ ಶಾಲೆಯಲ್ಲಿ  ಕೇವಲ ಒಂದು ವರ್ಷ ಮಾತ್ರ ಓದಿ ನಂತರ ಕಾರಣಾಂತರದಿಂದ ಬೇರೊಂದು ಸ್ಕೂಲಿಗೆ ಸೇರಿಕೊಂಡೆ. ಹಾಗಾಗಿ ಕೆಲವು ತಿಂಗಳುಗಳ ಕಾಲ ನಾವು ಒಟ್ಟಿಗೆ ಹೋಗಿ ಬರುವುದು ನಿಂತುಹೋಯಿತು. ಆದರೆ, ನಾನು ಸೇರಿದ ಶಾಲೆಯನ್ನೇ ಅವರೂ ಸೇರುವುದರೊಂದಿಗೆ ಮತ್ತೆ ನಮ್ಮ ಒಡನಾಟ ಶುರುವಾಯಿತು. (ನೀವು ನಗುವುದಿಲ್ಲ ಅಂದ್ರೆ ನಿಮಗೊಂದು ಹೇಳ್ತೀನಿ ಕಣ್ರೀ ......ಅದೇನು ಅಂದ್ರೆ, ನಾನು ಅವರಲ್ಲಿ ಪ್ರೀತಿಯನ್ನು ಇಷ್ಟ ಪಡತೊಡಗಿದ್ದೆ(!!!!!), ಅವಳಿಗೂ ನಾನೆಂದರೆ ತುಂಬಾ ಇಷ್ಟವಿತ್ತು(!?)). ಆಗ ನಾವು ಓದುತ್ತಿದ್ದಿದ್ದು 3 ನೆ ಕ್ಲಾಸು!!!. ಹೀಗಾಗಿ ಅವಳು ನನ್ನ first crush.
                  'ನಾನು ಚೆಡ್ಡಿ-ಅವಳು ಫ್ರಾಕು'. ದಿನ ಸಂಜೆ ಅವರ ಮನೆಗೆ ಹೋಗಿ ಅವರೊಂದಿಗೆ ಆಟ ಆಡ್ತಿದ್ದೆ. ಶಾಲೆಯಿಂದ  ಬರಬೇಕಾದರೆ ದಾರಿಯಲ್ಲಿ ನೆಲ್ಲಿ ಕಾಯಿ ಮರ ಇತ್ತು. ನಾನು ಅವಳಿಗೆ ನೆಲ್ಲಿ ಕಾಯಿ ಆರಿಸಿಕೊಂಡು ಹೋಗಿ ಕೊಡುತ್ತಿದ್ದೆ. ಅವಳಿಗೆ ನೆಲ್ಲಿಕಾಯಿ ಅಂದ್ರೆ ತುಂಬಾ ಇಷ್ಟ. ಅದನ್ನು ತಿನ್ನುವಾಗ ಅವಳು ಮುಖ ಕಿವುಚುವುದನ್ನು ನೋಡುವುದು ನಂಗೆ ಇಷ್ಟ. ಅವಳು ತನ್ನ ಅಕ್ಕಂದಿರೆದುರಿಗೆ  ನಾನು ಡ್ರಾಯಿಂಗ್ ತುಂಬಾ ಚೆನ್ನಾಗಿ ಮಾಡ್ತೀನಿ ಅಂತ ನನ್ನನ್ನು ಹೊಗಳುತ್ತಿದ್ದಳು. ಹಿಂದಿ ಪರೀಕ್ಷೆ ಸಮಯದಲ್ಲಿ ನಾನು ಅವಳ ಪೇಪರನ್ನು ನೋಡಿ ಕಾಪಿಮಾಡುತ್ತಿದ್ದರೆ, ಡ್ರಾಯಿಂಗ್ exam ಇದ್ದಾಗ ಅವಳಿಗೆ ಚಿತ್ರ ಬರೆದು ಕೊಟ್ಟು ಕೃತಾರ್ತನಾಗುತ್ತಿದ್ದೆ.
                  ಮಾರ್ಕ್ಸ್ ಕಾರ್ಡ್ ಸೈನ್ ಮಾಡಿಸಲು ಮನೆಗೆ ತಗೊಂಡು ಹೋಗುವಾಗ ಅವರು ತಮಗೆ ಬಂದಿದ್ದ ಅಂಕಗಳನ್ನು ಹೆಮ್ಮೆ ಇಂದ ಎಲ್ಲಾರಿಗೂ ತೋರಿಸುತ್ತಿದ್ದರು. ಆದರೆ ನಾನು ನನಗೆ ಬಂದಿರುತ್ತಿದ್ದ  'ಅಮೋಘ' ಅಂಕಗಳ ಬಗ್ಗೆ ಹೇಳಿಕೊಳ್ಳಲಾಗದೆ ಸಂಕೋಚ ಪಡುತ್ತಿರಬೇಕಾದರೆ ಅವಳು ಬಂದು " ಪರವಾಗಿಲ್ಲ ಬಿಡು" ಎಂಬಂತ ಮಾತುಗಳ್ಳನ್ನು ಆಡಿ ಮನಸ್ಸಿಗೆ ಸಮಾಧಾನ ಕೊಡುತ್ತಿದ್ದಳು. " mathsನಲ್ಲಿ ಕಡಿಮೆ ಬಂದಿದ್ರೆ ಏನಂತೆ, ಡ್ರಾಯಿಂಗ್ ನಲ್ಲಿ  ನೋಡು ನಿಂಗೆ  ಇಡೀ ಕ್ಲಾಸಿಗೆ highest ಬಂದಿದೆ... A grade!" ಅಂತೆಲ್ಲ ಹೇಳಿ  "ಗ್ರೇಟ್ ಕಣೋ ನೀನು" ಎಂಬಂತೆ ನೋಡುತ್ತಿದ್ದಳು. ಅವಳು ಅಷ್ಟು ಹೇಳುವುದೇ ತಡ ನಾನು ಎಲ್ಲಿಲ್ಲದ ಖುಷಿಯಿಂದ ಉಬ್ಬಿ ಹೋಗಿರುತ್ತಿದ್ದೆ. ಇದೆಲ್ಲ ಹೀಗೆ ನಡೆಯುತ್ತಿರಬೇಕಾದರೆ......ಬಂತು ಐದನೇ ಕ್ಲಾಸು, ಬಂತು ನವೋದಯ ಪರೀಕ್ಷೆ, ಅಲ್ಲಿಗೆ ನಾನು ನವೋದಯ ಶಾಲೆ ಸೇರಿಕೊಂಡು ಎಲ್ಲರಿಂದ ದೂರ ಹೋಗಬೇಕಾಯಿತು.
                ನವೋದಯದಲ್ಲಿ ಹತ್ತನೇ ಕ್ಲಾಸು ಮುಗಿಸಿಕೊಂಡು  ಪಿ.ಯು.ಸಿ. ಮಾಡಲು ಮತ್ತೆ ನಮ್ಮೂರಿಗೆ ಮರಳಿದೆ. ಊರಿಗೆ ಮರಳಿದ ಕೆಲವು ದಿನಗಳ ನಂತರ ಅವರು ಮೊದಲು ಇರುತ್ತಿದ್ದ ಮನೆ ಮುಂದೆ ಒಂದೆರಡು ಬಾರಿ ಸುಳಿದಾಡಿ  ಅವರು ಇನ್ನು ಇದೆ ಊರಿನಲ್ಲಿ ಇದ್ದಾರೋ ಇಲ್ಲವೊ ಪರೀಕ್ಷಿಸಿದ್ದೆ. ಆದರೆ ಆ ಮನೆ ಖಾಲಿಯಾಗಿತ್ತು. ಅಲ್ಲಿ ಯಾರು ಇದ್ದಿರಲಿಲ್ಲ. ಕೊಂಚ ಬೇಸರದೊಂದಿಗೆ ಮನೆಗೆ ಮರಳಿದ್ದೆ. ಅಂದು ರಾತ್ರಿ ಅಮ್ಮನ ಮಡಿಲಲ್ಲಿ ತಲೆ ಇಟ್ಟು ಮಲಗಿದ್ದಾಗ ಮೆಲ್ಲಗೆ ಅವರ ಬಗ್ಗೆ ವಿಚಾರಿಸಿದೆ....ಆಗ ಅಮ್ಮನಿಂದ ತಿಳಿದಿದ್ದು ಇಷ್ಟು, 'ಈಗ ಅವರು ಬೇರೆ ಕಾಲೋನಿ ಯಲ್ಲಿ ಮನೆ ಮಾಡಿಕೊಂಡು ಇದ್ದಾರೆಂದು, ಅವರೀಗ ತುಂಬಾ ಶ್ರೀಮಂತರೆಂದು, ಕಾರಿನಲ್ಲಿ ತಿರುಗುತ್ತಾರೆಂದು' ತಿಳಿಯಿತು. ಅಲ್ಲಿಗೆ ನಾನು ಅವಳನ್ನು ಭೇಟಿಯಾಗುವ ಆಸೆಯನ್ನು ಕೈ ಬಿಟ್ಟಿದ್ದೆ. ಆದರೆ ಅಪ್ಪ ಮಾತ್ರ " ಲೇ, ಆ ಹುಡ್ಗೀರು ಅವಾಗವಾಗ ಮತಾಡಿಸ್ತಿರ್ತಾರೆ, ನಿನ್ ಬಗ್ಗೆ ಕೇಳ್ತಿರ್ತಾರೆ" ಅಂತ ಹೇಳಿ ಮುರುಟಿಕೊಂಡಿದ್ದ ಆಸೆ ಯನ್ನು ಮತ್ತೆ ಚಿಗುರುವಂತೆ ಮಾಡಿದ್ದರು. ನಮ್ಮೂರಿನಲ್ಲಿ ಆಗ ಇದ್ದಿದ್ದೇ ಒಂದು ಕಾಲೇಜ್. ಹಾಗಾಗಿ ಊರಿನ ಸಮಸ್ತ ಸುಂದರಿಯರು, ಪುಂಡರು, ನನ್ನಂತ ಕೆಲವು ಅಮಾಯಕರು ಆ ಕಾಲೇಜಿನ ಮೆಟ್ಟಿಲು ತುಳಿಯುವುದು ಅನಿವಾರ್ಯವಾಗಿತ್ತು. ನಾನು ಕಾಲೇಜ್ join ಆಗುವ ಹೊತ್ತಿಗೆ ಒಂದು ತಿಂಗಳು ತಡವಾಗಿ ಹೋಗಿತ್ತು. ಹಾಗಾಗಿ ನಮ್ಮದೇ ಕ್ಲಾಸಿನಲ್ಲಿ ನಾನು ಹೊಸಬನಾಗಿದ್ದೆ. ಕ್ಲಾಸಿನಲ್ಲಿ ಅಲ್ಲಲ್ಲಿ ಒಂದೆರಡು ಪರಿಚಯದ ಮುಖಗಳು ಕಂಡು ಮಾತನಾಡಿಸಿದವು. ಅಂತಹದೇ ಯಾವುದೋ ಒಂದು ಮುಖದ ಪಕ್ಕ ಕುಳಿತುಕೊಂಡೆ.ನವೋದಯದಲ್ಲಿ ಓದಿ ಬಂದಿರುವುದರಿಂದ ನಾನೆಲ್ಲೋ ಮಹಾನ್ ಮೇಧಾವಿ ಇರಬೇಕೆಂದು ಊಹಿಸಿ ಇನ್ನೂ ಕೆಲವು ಮುಖಗಳು ಮಾತನಾಡಿಸಲು ಹಿಂದೇಟು ಹಾಕುತ್ತಿದ್ದವು. ಇದೆಲ್ಲವುಗಳ ನಡುವೆ ನನ್ನ ಕಣ್ಣುಗಳು ಆ ಒಂದು ಮುಖಕ್ಕಾಗಿ ಹುಡುಕುತ್ತಿದ್ದವು. "ಇದೇ ಊರಲ್ಲಿದ್ದಮೇಲೆ ಇದೇ ಕಾಲೇಜಿಗೆ ಬರಲೇ ಬೇಕು...ಆದರು ಯಾಕೆ ಇಲ್ಲಿ ಕಾಣಿಸುತ್ತಿಲ್ಲ". ಪಕ್ಕದಲ್ಲಿದ್ದ ಮುಖಕ್ಕೆ ಕೇಳೋಣವೆಂದರೆ " ಎನಲೇ ಮಾಮ, ಬಂದಕೂಡಲೇ ಹುಡುಗಿ ಬಗ್ಗೆ ವಿಚಾರ್ಸಕ್ ಹತ್ತಿಯಲ, ಏನ್ ಸಮಾಚಾರ?"ಎಂದು ಎಲ್ಲಿ excite ಆಗ್ಬಿಡ್ತಾನೋ ಅಂತ ಭಯ. ಅವರು ಇಲ್ಲೇ ಇದ್ದಾರೆ, ನನಗೇ ಅವರನ್ನು ಗುರುತಿಸಲು ಆಗುತ್ತಿಲ್ಲವೇ?! ಅಥವಾ ಅವರು ಓದುವುದನ್ನು ನಿಲ್ಲಿಸಿಬಿಟ್ಟರೆ?!"  ಹೀಗೆ ಮನಸ್ಸು ಏನೇನೊ ಯೋಚನೆಗಳು ಮಾಡುತ್ತಿದ್ದಾಗ...ಇದ್ದಕ್ಕಿದ್ದಂತೆ ಕ್ಲಾಸ್ ರೂಮಿನಲ್ಲಿ  ಗಲಿ ಬಿಲಿ ಶುರುವಾಯಿತು ಮರುಕ್ಷಣದಲ್ಲೇ ಉಸಿರಾಟಗಳು, ನಿಟ್ಟುಸಿರುಗಳೂ ಕೆಳಿಸಬಲ್ಲಂತ ಮಹಾ ಮೌನವೊಂದು ಅಲ್ಲಿ ಬೆಳೆಯತೊಡಗಿತು. ಅಲ್ಲಿದ್ದ ಗಂಡು ಮುಖಗಳಲ್ಲಿದ್ದ ಕಣ್ಣು ಗುಡ್ಡೆ ಗಳೆಲ್ಲವೂ  ಬಾಗಿಲಿನ ಕಡೆಗೆ ನೆಟ್ಟಿದ್ದವು. ಈ ಬೆಳವಣಿಗೆಯಿಂದ ಮೊದಲಿಗೆ ಕೊಂಚ ಗಾಭರಿಯಾದ ನಾನೂ ಕುತೂಹಲದಿಂದ ನನ್ನ ಕಣ್ಣು ಗಳನ್ನು ಬಾಗಿಲಿನೆಡೆಗೆ ತಿರುಗಿಸಿದೆ. ಆಗ ಬಂದಳು ಅವಳು. " ಲೇ ಮಾಮ, ಇವಳೇ ನೋಡಲೇ ಈ ಕಾಲೇಜಿನ ಫಿಗರ್ " ಅಂತ ಪಕ್ಕದ ಮುಖದ ಬಾಯಿ ಬಡಬಡಿಸುತ್ತಿತ್ತು.ಅವರು ಕೇವಲ ಕಾಲೇಜಿಗೆ ಮಾತ್ರವಲ್ಲ  ಇಡೀ ಊರಿಗೆ ಸುಂದರಿಯರಾಗಿದ್ದರು (ದುರದೃಷ್ಟವೆಂದರೆ, ಈ ಸತ್ಯ ಅವರಿಗೂ ಗೊತ್ತಿತ್ತು). ನಾನೋ ಹಾಸ್ಟೆಲ್ ಜೀವನದಿಂದಾಗಿ ಬಡಕಲು ಸನ್ಯಾಸಿ ಥರ ಆಗಿದ್ದೆ. ಅವಳನ್ನು ಹಾಗೆ ಅಲ್ಲಿ ನೋಡಿದ ಮರುಕ್ಷಣವೇ ನಾನು ಅವಳನ್ನು ಮಾತನಾಡಿಸುವ ಆಸೆಯನ್ನು ಮತ್ತೊಮ್ಮೆ ಕೊಂದುಕೊಂಡೆ. ಅವಳಿಗೆ ನನ್ನ ನೆನಪು ಇರುವುದಕ್ಕೆ ಸಾಧ್ಯವೇ ಇಲ್ಲಾ ಎಂದು ಮನಸ್ಸು ನಿರ್ಧರಿಸಿತ್ತು. ಯಾಕೆ ನಾನಾಗೆ ಹೋಗಿ ಮಾತಾಡಿಸಿ ನಗೆಪಾಟಲಾಗಬೇಕು ಅಂತ ಸುಮ್ಮನಾಗಿ ಬಿಟ್ಟಿದ್ದೆ.
                  ಆವತ್ತು ಮಧ್ಯಾನ biology lab ಇತ್ತು. batches ಮಾಡುತ್ತಿದ್ದರು. ತುಕ್ಕು ಹಿಡಿದಿದ್ದ ನನ್ನ ಹಣೆ ಬರಹಕ್ಕೆ ಅದ್ಯಾರು ಸೀಮೆಎಣ್ಣೆ ತಗೊಂಡು ಉಜ್ಜಿದ್ದರೋ ಕಾಣೆ....ನನ್ನನ್ನು ಅವಳಿದ್ದ batch ಗೆ  ಹಾಕಬೇಕೆ. ಅದೂ ಸಾಲದೆಂಬಂತೆ ನನ್ನನ್ನು ಹುಡುಗಿಯರೊಂದಿಗೆ ಕೂದಿಸಬೇಕೆ. ಹೀಗೆ ನನಗೆ ಬಯಸದೆ ಬಂದ ಭಾಗ್ಯವನ್ನು ಕಂಡು ಉಳಿದ ಗಂಡು ಮುಖಗಳು ಕಪ್ಪಿಟ್ಟಿ ದ್ದವು. ಹುಡುಗಿಯರ ಗುಂಪಿನಲ್ಲಿ ನಾನು ಸಂಕೋಚದಿಂದ ಮುದುಡಿಕೊಂಡು ಕುಳಿತಿದ್ದೆ. ಅಲ್ಲೇ, ಸ್ವಲ್ಪ ಪಕ್ಕದಲ್ಲೇ ಅವಳು ಕುಳಿತಿದ್ದರು ಕೂಡ ಅವಳೆಡೆಗೆ ನೋಡಲು ಹಿಂದೇಟು ಹಾಕಿದ್ದೆ.   ಆ ದಿನ ಲ್ಯಾಬ್ ಮುಗಿಸಿಕೊಂಡು ಇನ್ನೇನು ಹೊರ ಬೀಳಬೇಕು  ಅನ್ನುವಷ್ಟರಲ್ಲಿ  ನನ್ನ ಹೆಸರು ಕೂಗಿದ್ದು ಕೇಳಿಸಿತು...ಅದು ಖಂಡಿತ ಅವಳದೇ ದ್ವನಿ...ತಿರುಗಿದೆ...ಹೌದು, ಅದು ಅವಳೇ!!! ಹಿತವಾದ ಮುಗುಳುನಗೆಯಂದಿಗೆ ನನ್ನ ಹತ್ತಿರ ಬರತೊಡಗಿದಳು......ನನ್ನ ಕಾಲ ಕೆಳಗೆ ಭೂಮಿ ಕಂಪಿಸುತ್ತಿದೆ ಏನೋ ಎಂಬಂತೆ ಕಾಲುಗಳು ನಡುಗಲು ಆರಂಬಿಸಿದವು. ನನ್ನ ಎದೆ ಸ್ಪಷ್ಟವಾಗಿ ಕೇಳುವಂತೆ ಭಾರಿಸಿಕೊಳ್ಳತೊಡಗಿತು. ಲ್ಯಾಬ್ ನಲ್ಲಿ ಇಟ್ಟಿದ್ದ ಅಸ್ತಿಪಂಜರ ನನ್ನೀ ಪರೀಸ್ಥಿತಿ ನೋಡಿ ಹಲ್ಲು ಕಿಸಿಯುತ್ತಿರುವಂತೆ ಭಾಸವಾಯಿತು....simple ಆಗಿ ಹೇಳಬೇಕೆಂದರೆ, ಅವಳು ಹತ್ತಿರ ಬರುವುದರೊಳಗಾಗಿ ನಾನು ಬೆವರಿಳಿಸಿಕೊಂಡು ನೀರು ನೀರಾಗಿದ್ದೆ. " ಏನು, ಚೆನ್ನಾಗಿದ್ದೀಯ?" ಅದೇ ಮುಗುಳ್ನಗೆ ಯೊಂದಿಗೆ ಕೇಳಿದ್ದಳುಅವಳು. " ಹುಂ, ನೀನು?!" ಎಂದು ಕೇಳುವಷ್ಟರಲ್ಲಿ  ಗಂಟಲಿನಲ್ಲಿ ನಾಲಿಗೆ ಅಡ್ಡಡ್ಡ ಸಿಕ್ಹಾಕಿಕೊಂಡಂತೆ ಆಗಿ.....ಮುಂದೇನು ಮಾತನಾಡಲಾಗದೆ, ಅವಳ ಮುಖವು ನೋಡಲಾಗದೆ ಅಲ್ಲಿಂದ ಕಾಲು ಕಿತ್ತಿದ್ದೆ.
                   'ಎಲ್ಲಿ ನಾನು ನೆಲ್ಲಿ ಕಾಯಿ ತರುವುದನ್ನು ಆಸೆ ಇಂದ ಕಾಯುತಿದ್ದ ಫ್ರಾಕು......ಎಲ್ಲಿ ಈ ಪ್ರಾಣವನ್ನೇ ಗಂಟಲಿಗೆ ತರಿಸಿ ಬಿಡುವ ಚೂಡಿದಾರ್ '. ' "ನೀನು ಗ್ರೇಟ್ ಕಣೋ" ಎಂಬಂತೆ ನೋಡಿ ಧೈರ್ಯ ತುಂಬುತ್ತಿದ್ದವಳು ಎಲ್ಲಿ........' ನನ್ನ ಇದ್ದ ಬದ್ದ ಧೈರ್ಯವನ್ನೆಲ್ಲ ಒಂದೇ  ಒಂದು ಮುಗುಳ್ನಗೆಯಿಂದ ನುಚ್ಚು ನೂರು ಮಾಡುವ ಇವಳೆಲ್ಲಿ'.  "ಅಲ್ಲ, ಇವಳು ಅವಳಲ್ಲ.......ಅವಳಾಗಿದ್ದರೂ ಇವಳು ನನಗಲ್ಲ....." ಅಂತ ಅವತ್ತೇ ನನಗೇ ಗೊತ್ತಾಗಿ ಹೋಯಿತು. ಅಷ್ಟೇ, ಅವಳ ಮೇಲಿನ ಆಸೆಯನ್ನು ಅದೇ ದಿನ ಶಾಶ್ವತವಾಗಿ ಕೊಂದುಕೊಂಡುಬಿಟ್ಟೆ.    

                          ಇಷ್ಟೇ, ಇದಾದ ಮೇಲೆ ಒಂದೆರಡು ಸಾರಿ ಅವಳಾಗೇ ಮತಾಡ್ಸಿದ್ರು. ನಾನು ಹಾಗೆ ತೊದಲುತ್ತಾ ಮಾತಾಡ್ತಿದ್ದೆ. ಕಾಲೇಜ್ ಮುಗೀತು.....ಮುಗೀತು. ಮುಂದೆ ನಾನು ಎಲ್ಲೆಲ್ಲಿಗೋ ಹೋದೆ. ಅವರೇನಾದರೂ ಅಂತನೂ ಗೊತ್ತಾಗ್ಲಿಲ್ಲ. ಕೊನೆಯದಾಗಿ ನಾನು ಅವಳನ್ನು ನೋಡಿದ್ದು ಮೂರು  ವರ್ಷದ ಕೆಳಗೆ ಇಲ್ಲೇ ಬೆಂಗಳೂರಿನಲ್ಲಿ.......ಜೊತೆಯಲ್ಲಿ ಯಾರೋ ಒಬ್ಬ handsome ನಿಂತಿದ್ದ.
ಈಗ ಅವಳು ಗರ್ಭಿಣಿ ಅಂತೆ.....!!!

ಭಾನುವಾರ, ಅಕ್ಟೋಬರ್ 25, 2009

ನರಕ ತುಂಬಲಿದೆ!

                   ....ಇನ್ನು ಮೂರೇ  ವರ್ಷ ಅಂತೆ, ಪ್ರಪಂಚ ನಾಶ ಆಗ್ತಾದಂತೆ. ಭೂಮಿಮೇಲೆ ಒಂದು ನರ ಪಿಳ್ಳೆನೂ  ಉಳಿಯೋಲ್ಲವಂತೆ. ಎಲ್ಲಾರು ಕುಂತ್ ಕುಂತಲ್ಲೇ, ನಿಂತ್ ನಿಂತಲ್ಲೇ ನೆಗ್ದು ಬೀಳ್ತಾರಂತೆ. ಕೊಳವೆ ಬಾವಿಯಲ್ಲಿ ಚಿಕ್ಕ ಮಕ್ಕಳು ಬಿದ್ದು ಸಾಯುವಂತೆ ದೊಡ್ಡವರು ಬಾಯಿ ಬಿಟ್ಟ ಭೂಮಿಯೊಳಗೆ ಗುಂಪು ಗುಂಪಾಗಿ ಬಿದ್ದು ಸಾಯುತ್ತಾರಂತೆ. ಅದೆಲ್ಲಿಂದಲೋ ನೀರು ಊರೊಳಗೆಲ್ಲ ನುಗ್ಗಿ ಕೈಗೆ ಸಿಕ್ಕವರನೆಲ್ಲ ತನ್ನೊಂದಿಗೆ  ಎಳೆದುಕೊಂಡು ಮತ್ತದೆಲ್ಲಿಗೋ ಹೊರಟು ಹೋಗುತ್ತದಂತೆ. ಸಾಯುವುದಕ್ಕೆ ಎಷ್ಟು ವಿಧಗಳಿವೆಯೋ ಅಷ್ಟೆಲ್ಲಾ ವಿಧಗಳಿಂದ ಜನರು ಸಾಯುತ್ತಾರಂತೆ. ಸಾಯಲಿ ಬಿಡ್ರಿ.....ನಾನೊಬ್ನೇನ ಸಾಯೋದು? ಪ್ರಪಂಚದಲ್ಲಿ ಯಾರು ಉಳಿಯೋಲ್ಲ ಅಂತಿದಾರೆ....ಒಳ್ಳೇದೇ ಆಯ್ತು. ಎಲ್ರೂ ಒಟ್ಟಿಗೆ ಹೊರಟುಬಿಡೋಣ. ಸಾಯಬೇಕಾದರೆ ನಮಗೆ ಬೇಕಾದವರೊಂದಿಗೆ ಕೈ ಕೈ ಹಿಡ್ಕೊಂಡು ನಿಂತಿದ್ರೆ ಇನ್ನೂ ಒಳ್ಳೇದು, ಹೋಗ್ತಾ ಜೊತೆಗೆ ಹೋಗಬಹುದು...ಜನ ಜಂಗುಳಿಯಲ್ಲಿ ನಮ್ಮವರಿಂದ ಕಳೆದು ಹೋಗುವ ಭಯವಿರುವುದಿಲ್ಲ, ಗಂಡ-ಹೆಂಡತಿ-ಮಕ್ಕಳು, ತಾಯಿ-ಮಗ, ಗೆಳೆಯ-ಗೆಳತಿ, ಎಡ್ಡಿ-ಶೋಭಾ, ದೇವೇಗೌಡರು-ಮಕ್ಕಳು-ರಾಧಿಕ, ಸಾಲ ಕೊಟ್ಟವನು-ಸಾಲ ಇಸ್ಕೊಂಡವನು, ಹೀಗೆ ಅವರವರಿಗೆ ಬೇಕಾದವರ ಕೈ ಹಿಡ್ಕೊಂಡು ಹೋಗ್ತಾ ಇರ್ಬೇಕು ಅಷ್ಟೇ.
                           "ಸರಿ, ಹೋಗೋಣ, ಆದರೆ ಎಲ್ಲಿಗೆ?!" ಎಂಬ  ಅಮಾಯಕ ಪ್ರಶ್ನೆ ಮಾತ್ರ ಕೇಳಬೇಡಿ. ಭೂಮಿಮೇಲೆ ಮನುಷ್ಯ ಎಂಬ ಪ್ರಾಣಿಯಾಗಿ ಹುಟ್ತೀವಿ, ಹುಟ್ಟಿದ ಒಂದೇ ಕಾರಣಕ್ಕಾಗಿ ಸಾಯ್ತೀವಿ...ಈ ಹುಟ್ಟಿ ಸಾಯುವ ಎರಡು ಕ್ರೀಯೆಗಳ ನಡುವೆ  ಅದೇನೋ ಪಾಪ-ಪುಣ್ಯ ಅಂತ ಮಾಡಿಬಿಡ್ತೀವಂತೆ( ನಮಗೆ ಗೊತ್ತಿಲ್ದೆ!). ಮೇಲೆ (!?) ಒಬ್ಬ ಕೂತ್ಕೊಂಡು ನಮ್ಮ ಈ ಪಾಪ-ಪುಣ್ಯದ ಲೆಕ್ಕಾಚಾರ ಬರೀತಿರ್ತಾನಂತೆ ( ಅವನದು ಅದೇನು ಹಣೆ ಬರಹನೋ, ಪಾಪ.). ಒಬ್ಬ ವ್ಯಕ್ತಿ ಸತ್ತ ಮೇಲೆ ಅವನ ಈ ಪಾಪ-ಪುಣ್ಯದ account book ತೆಗೆದು ಗುಣಾಕಾರ, ಬಾಗಾಕಾರ, ಕೂಡಿಸಿ, ಕಳೆದು ಎಲ್ಲ ಮಾಡಿ.(ಅಸಲಿಗೆ ಇಷ್ಟೆಲ್ಲಾ ಮಾಡೋದು ಬೇಕಿತ್ತಾ?!) ಅವನನ್ನು next ಎಲ್ಲಿಗೆ ಕಳಿಸಬೇಕೆಂದು ನಿರ್ಧರಿಸುತ್ತಾರೆ. ಮಾನವ ಸಹಜ ವರ್ತನೆಗಳೊಂದಿಗೆ ಬದುಕಿದಿದ್ದರೆ ಅವನನ್ನು ನರಕಕ್ಕೆ ತಳ್ಳುತ್ತಾರೆ. ಬದುಕಿಯೂ ಸತ್ತಂತಿದ್ದವರನ್ನು ಸ್ವರ್ಗಕ್ಕೆ ಕಳಿಸುತ್ತಾರಂತೆ.(ಇಲ್ಲಿಗೆ ಹೋದವರು ತುಂಬ ವಿರಳ. ಅದು ಕ್ಲಾಸ್ ರೂಂ ಗಳ ಹಾಗೆ ಖಾಲಿ ಹೊಡೆಯುತ್ತಿರುತ್ತದಂತೆ!!). ಹೀಗಿರುವ  ಸ್ವರ್ಗವೆಂಬ ಮಹಾ boring ಸ್ಥಳಕ್ಕೆ ನಾವಾದರು ಯಾಕೆ ಹೋಗ್ಬೇಕು, ಅಲ್ವ? (ನಾವು ಹೋಗ್ತೀವಂದ್ರು ನಮ್ನ ಅಲ್ಲಿಗೆ ಕಳಿಸೋದಿಲ್ಲ, ಅದ್ ಬೇರೆ ಮಾತು).
                  ಸರಿ, ಇದೆಲ್ಲ ಹೋಗ್ಲಿ ಅತ್ಲಾಗೆ. ಒಂದಂತು ಗ್ಯಾರಂಟಿ. ಪ್ರಪಂಚದಲ್ಲಿ ಪ್ರಳಯ ಆಗಿ  ಮಾನವ ಸಂಕುಲ ಸರ್ವ ನಾಶ ಆದಮೇಲೆ whole sale ಆಗಿ ನಾವೆಲ್ಲರೂ ಹೋಗೋದು ನರಕಕ್ಕೆ. ನಿಜವಾದ ಸಮಸ್ಯೆ ಶುರುವಾಗೋದೇ ಇಲ್ಲಿ.

                                                         ( ಮುಂದುವರೆಯುವುದು)

ಮಂಗಳವಾರ, ಮಾರ್ಚ್ 24, 2009

ನಾನು ಬಂದಿದ್ದೇನೆ ....

ಇನ್ನು ಇವತ್ ಬಂದೀನಿ ..... ಸ್ವಲ್ಪ ತಡ್ಕೋರಿ.