....ಇನ್ನು ಮೂರೇ ವರ್ಷ ಅಂತೆ, ಪ್ರಪಂಚ ನಾಶ ಆಗ್ತಾದಂತೆ. ಭೂಮಿಮೇಲೆ ಒಂದು ನರ ಪಿಳ್ಳೆನೂ ಉಳಿಯೋಲ್ಲವಂತೆ. ಎಲ್ಲಾರು ಕುಂತ್ ಕುಂತಲ್ಲೇ, ನಿಂತ್ ನಿಂತಲ್ಲೇ ನೆಗ್ದು ಬೀಳ್ತಾರಂತೆ. ಕೊಳವೆ ಬಾವಿಯಲ್ಲಿ ಚಿಕ್ಕ ಮಕ್ಕಳು ಬಿದ್ದು ಸಾಯುವಂತೆ ದೊಡ್ಡವರು ಬಾಯಿ ಬಿಟ್ಟ ಭೂಮಿಯೊಳಗೆ ಗುಂಪು ಗುಂಪಾಗಿ ಬಿದ್ದು ಸಾಯುತ್ತಾರಂತೆ. ಅದೆಲ್ಲಿಂದಲೋ ನೀರು ಊರೊಳಗೆಲ್ಲ ನುಗ್ಗಿ ಕೈಗೆ ಸಿಕ್ಕವರನೆಲ್ಲ ತನ್ನೊಂದಿಗೆ ಎಳೆದುಕೊಂಡು ಮತ್ತದೆಲ್ಲಿಗೋ ಹೊರಟು ಹೋಗುತ್ತದಂತೆ. ಸಾಯುವುದಕ್ಕೆ ಎಷ್ಟು ವಿಧಗಳಿವೆಯೋ ಅಷ್ಟೆಲ್ಲಾ ವಿಧಗಳಿಂದ ಜನರು ಸಾಯುತ್ತಾರಂತೆ. ಸಾಯಲಿ ಬಿಡ್ರಿ.....ನಾನೊಬ್ನೇನ ಸಾಯೋದು? ಪ್ರಪಂಚದಲ್ಲಿ ಯಾರು ಉಳಿಯೋಲ್ಲ ಅಂತಿದಾರೆ....ಒಳ್ಳೇದೇ ಆಯ್ತು. ಎಲ್ರೂ ಒಟ್ಟಿಗೆ ಹೊರಟುಬಿಡೋಣ. ಸಾಯಬೇಕಾದರೆ ನಮಗೆ ಬೇಕಾದವರೊಂದಿಗೆ ಕೈ ಕೈ ಹಿಡ್ಕೊಂಡು ನಿಂತಿದ್ರೆ ಇನ್ನೂ ಒಳ್ಳೇದು, ಹೋಗ್ತಾ ಜೊತೆಗೆ ಹೋಗಬಹುದು...ಜನ ಜಂಗುಳಿಯಲ್ಲಿ ನಮ್ಮವರಿಂದ ಕಳೆದು ಹೋಗುವ ಭಯವಿರುವುದಿಲ್ಲ, ಗಂಡ-ಹೆಂಡತಿ-ಮಕ್ಕಳು, ತಾಯಿ-ಮಗ, ಗೆಳೆಯ-ಗೆಳತಿ, ಎಡ್ಡಿ-ಶೋಭಾ, ದೇವೇಗೌಡರು-ಮಕ್ಕಳು-ರಾಧಿಕ, ಸಾಲ ಕೊಟ್ಟವನು-ಸಾಲ ಇಸ್ಕೊಂಡವನು, ಹೀಗೆ ಅವರವರಿಗೆ ಬೇಕಾದವರ ಕೈ ಹಿಡ್ಕೊಂಡು ಹೋಗ್ತಾ ಇರ್ಬೇಕು ಅಷ್ಟೇ.
"ಸರಿ, ಹೋಗೋಣ, ಆದರೆ ಎಲ್ಲಿಗೆ?!" ಎಂಬ ಅಮಾಯಕ ಪ್ರಶ್ನೆ ಮಾತ್ರ ಕೇಳಬೇಡಿ. ಭೂಮಿಮೇಲೆ ಮನುಷ್ಯ ಎಂಬ ಪ್ರಾಣಿಯಾಗಿ ಹುಟ್ತೀವಿ, ಹುಟ್ಟಿದ ಒಂದೇ ಕಾರಣಕ್ಕಾಗಿ ಸಾಯ್ತೀವಿ...ಈ ಹುಟ್ಟಿ ಸಾಯುವ ಎರಡು ಕ್ರೀಯೆಗಳ ನಡುವೆ ಅದೇನೋ ಪಾಪ-ಪುಣ್ಯ ಅಂತ ಮಾಡಿಬಿಡ್ತೀವಂತೆ( ನಮಗೆ ಗೊತ್ತಿಲ್ದೆ!). ಮೇಲೆ (!?) ಒಬ್ಬ ಕೂತ್ಕೊಂಡು ನಮ್ಮ ಈ ಪಾಪ-ಪುಣ್ಯದ ಲೆಕ್ಕಾಚಾರ ಬರೀತಿರ್ತಾನಂತೆ ( ಅವನದು ಅದೇನು ಹಣೆ ಬರಹನೋ, ಪಾಪ.). ಒಬ್ಬ ವ್ಯಕ್ತಿ ಸತ್ತ ಮೇಲೆ ಅವನ ಈ ಪಾಪ-ಪುಣ್ಯದ account book ತೆಗೆದು ಗುಣಾಕಾರ, ಬಾಗಾಕಾರ, ಕೂಡಿಸಿ, ಕಳೆದು ಎಲ್ಲ ಮಾಡಿ.(ಅಸಲಿಗೆ ಇಷ್ಟೆಲ್ಲಾ ಮಾಡೋದು ಬೇಕಿತ್ತಾ?!) ಅವನನ್ನು next ಎಲ್ಲಿಗೆ ಕಳಿಸಬೇಕೆಂದು ನಿರ್ಧರಿಸುತ್ತಾರೆ. ಮಾನವ ಸಹಜ ವರ್ತನೆಗಳೊಂದಿಗೆ ಬದುಕಿದಿದ್ದರೆ ಅವನನ್ನು ನರಕಕ್ಕೆ ತಳ್ಳುತ್ತಾರೆ. ಬದುಕಿಯೂ ಸತ್ತಂತಿದ್ದವರನ್ನು ಸ್ವರ್ಗಕ್ಕೆ ಕಳಿಸುತ್ತಾರಂತೆ.(ಇಲ್ಲಿಗೆ ಹೋದವರು ತುಂಬ ವಿರಳ. ಅದು ಕ್ಲಾಸ್ ರೂಂ ಗಳ ಹಾಗೆ ಖಾಲಿ ಹೊಡೆಯುತ್ತಿರುತ್ತದಂತೆ!!). ಹೀಗಿರುವ ಸ್ವರ್ಗವೆಂಬ ಮಹಾ boring ಸ್ಥಳಕ್ಕೆ ನಾವಾದರು ಯಾಕೆ ಹೋಗ್ಬೇಕು, ಅಲ್ವ? (ನಾವು ಹೋಗ್ತೀವಂದ್ರು ನಮ್ನ ಅಲ್ಲಿಗೆ ಕಳಿಸೋದಿಲ್ಲ, ಅದ್ ಬೇರೆ ಮಾತು).
ಸರಿ, ಇದೆಲ್ಲ ಹೋಗ್ಲಿ ಅತ್ಲಾಗೆ. ಒಂದಂತು ಗ್ಯಾರಂಟಿ. ಪ್ರಪಂಚದಲ್ಲಿ ಪ್ರಳಯ ಆಗಿ ಮಾನವ ಸಂಕುಲ ಸರ್ವ ನಾಶ ಆದಮೇಲೆ whole sale ಆಗಿ ನಾವೆಲ್ಲರೂ ಹೋಗೋದು ನರಕಕ್ಕೆ. ನಿಜವಾದ ಸಮಸ್ಯೆ ಶುರುವಾಗೋದೇ ಇಲ್ಲಿ.
( ಮುಂದುವರೆಯುವುದು)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ